ಗದಗ ಜಿಲ್ಲೆಯಲ್ಲಿ ಈಗಾಗಲೇ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆದ್ರೆ ರಾಜ್ಯ ಸರ್ಕಾರ ಗದಗ ಜಿಲ್ಲೆಗೆ ಈವರೆಗೂ ಟೆಸ್ಟಿಂಗ್ ಕಿಟ್ ಕೊಡದೇ ಇರುವುದು ದುರ್ದೈವ ಎಂದು ಶಾಸಕ ಹೆಚ್ ಕೆ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಕಳೆದ ಮಾರ್ಚ್ 23 ರಂದೇ ಜಿಲ್ಲೆಗೊಂದು ಟೆಸ್ಟಿಂಗ್ ಲ್ಯಾಬೊರೇಟರಿ ಆಗಲಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದೆ. ಇವತ್ತಿಗೆ ಕೆಎಂಸಿಯಲ್ಲಿ ಲ್ಯಾಬೊರೇಟರಿ ಬಿಟ್ರೆ ಎಲ್ಲಿಯೂ ಲ್ಯಾಬ್ ಆಗಿಲ್ಲ. ಇದು ಸರಕಾರದ ಬೇಜವಾಬ್ದಾರಿತನ ಎಂದು ಸರ್ಕಾರದ ವಿರುದ್ಧ ಶಾಸಕ ಹೆಚ್ ಕೆ ಪಾಟೀಲ್ ಕಿಡಿಕಾರಿದ್ದಾರೆ.
ಗದಗದ ಮೆಡಿಕಲ್ ಕಾಲೇಜಿನಲ್ಲಿ ಮೂರು ಉಪಕರಣಗಳಿವೆ. ಆದರೆ ಇವತ್ತಿನವರೆಗೂ ಐಸಿಎಂ ಯವರು ಪರವಾನಿಗೆ ನೀಡುತ್ತಿಲ್ಲ. ನೊಡಲ್ ಆಫೀಸರ್ ನಿಷ್ಕಾಳಜಿಯ ಉತ್ತರ ನೀಡುತ್ತಿದ್ದಾರೆ. ಮೂರು ಕುಟುಂಬದಲ್ಲಿ ಈವರೆಗೂ ಶವಗಳನ್ನು ಅಂತ್ಯ ಸಂಸ್ಕಾರ ಮಾಡಿಲ್ಲ. ಆಕಸ್ಮಿಕವಾಗಿ ಸಾವನ್ನಪ್ಪಿದ ಮೂರು ಜನರ ಅಂತ್ಯಸಂಸ್ಕಾರ ಇನ್ನೂ ಆಗಿಲ್ಲ. ಅದಕ್ಕೆ ಅವರ ಟೆಸ್ಟ್ ರಿಪೋರ್ಟ್ ಬರದೇ ಇರೋದು ಕಾರಣ. ಹೀಗಾದ್ರೆ ಸಾವನಪ್ಪಿದ ಕುಟುಂಬಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಇನ್ನು ಪಿಪಿಇ ಕಿಟ್ ಗಳು ಎಲ್ಲ ಕಡೆಯೂ ಲಭ್ಯವಾಗುವಂತಾಗಲಿ. ಆಸ್ಪತ್ರೆಗಳು ಸಿದ್ಧವಾಗಲಿ ಎಂದು ಪದೇ ಪದೇ ಹೇಳುತ್ತಿದ್ದೇನೆ. ಐಸಿಎಂಆರ್ ನೆಪ ಹೇಳುವ ಬದಲು ಪ್ರತ್ಯೇಕವಾದ ದಾರಿ ಹುಡುಕಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಅವರು, ಐಸಿಎಂಆರ್ ನಮ್ಮ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಆರೋಪಿಸಿದರು. ಹೀಗೆ ಕಾಯುತ್ತಾ ಕುಳಿತರೆ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಜಾಸ್ತಿ ಆಗುತ್ತದೆ. ಸಮುದಾಯವಾಗಿ ಕೊರೊನಾ ಹಬ್ಬುತ್ತಿದೆ. ಇಷ್ಟೆಲ್ಲ ಆದರೂ ಸರಕಾರ ಸುಮ್ಮನೆ ಕೂರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.








