ತೌಕ್ತೆ ಅಬ್ಬರಕ್ಕೆ ಕರಾವಳಿ ತತ್ತರ : ಪರಿಹಾರ ಕಾರ್ಯಾಚರಣೆಗೆ ಸಿಎಂ ಸೂಚನೆ
ಬೆಂಗಳೂರು : ಅರಬ್ಬಿಯಲ್ಲಿ ತೌಕ್ತೆ ತಾಂಡವವಾಡುತ್ತಿದ್ದು, ಕರಾವಳಿ ತತ್ತರಿಸಿ ಹೋಗುತ್ತಿದೆ. ಚಂಡಮಾರುತದಿಂದ ಕರಾವಳಿಯ ಅನೇಕ ಪ್ರದೇಶಗಳು ಹಾನಿಗೊಳಗಾಗಿದ್ದು, ಆ ಪ್ರದೇಶದಲ್ಲಿ ತಕ್ಷಣವೇ ಪರಿಹಾರ ಕಾರ್ಯಚರಣೆ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ತೌಕ್ತೆ ಅಬ್ಬರ ಮುಂದುವರೆದಿದ್ದು, ಮುಖ್ಯಮಂತ್ರಿಗಳು ಕರಾವಳಿ ಭಾಗದ ಜಿಲ್ಲಾಧಿಕಾರಿಗಳು ಹಾಗೂ ಸಚಿವರಿಗೆ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.
ಅಲ್ಲದೆ ತಕ್ಷಣವೇ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಿದ್ದಾರೆ.
ಪರಿಹಾರ ಕಾರ್ಯಕ್ಕೆ ಸರ್ಕಾರದಿಂದ ಏನೇ ತುರ್ತು ನೆರವು ಬೇಕಿದ್ದರೂ ಸಂಬಂಧಪಟ್ಟ ಸಚಿವರಿಗೆ ಅಥವಾ ನನಗೆ ನೇರವಾಗಿ ಕರೆ ಮಾಡುವಂತೆ ಸೂಚನೆ ನೀಡಿದ್ದಾರೆ.










