ಒಂದು ತಿಂಗಳು ಲಾಕ್ ಡೌನ್ ಅನಿವಾರ್ಯ : ಹೆಚ್ ಡಿಕೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಒಂದು ತಿಂಗಳು ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಲಾಕ್ ಡೌನ್ ವಿಸ್ತರಣೆ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಹೇರುವುದು ಅನಿವಾರ್ಯವಾಗಿದೆ.
ಲಾಕ್ ಡೌನ್ ನಿಂದ ಕೊರೊನಾ ನಿಯಂತ್ರಣ ಆಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದ್ರೆ ಇದು ಸುಳ್ಳು, ನಾನು ಶಾಸಕರಿಂದ ಮಾಹಿತಿ ಪಡೆದುಕೊಂಡಿದ್ದೇನೆ.
ಸರ್ಕಾರ ಕೊರೊನಾ ಪರೀಕ್ಷೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಕೊರೊನಾ ಕೇಸ್ ಗಳು ಕಡಿಮೆಯಾಗುತ್ತಿದೆ. ತಜ್ಞರ ಸಮಿತಿ ಸಹ ಟೆಸ್ಟಿಂಗ್ ಕಡಿಮೆ ಮಾಡಬಾರದು ಎಂದು ತಿಳಿಸಿದೆ.
ಸರ್ಕಾರ ಸತ್ಯ ಮುಚ್ಚಿಡಬಾರದು. ದೊಡ್ಡ ಅನಾಹುತ ಆಗದಂತೆ ನೋಡಿಕೊಳ್ಳಬೇಕು. ಲಾಕ್ ಡೌನ್ ಅವಶ್ಯಕತೆ ಇದ್ದು, ಸರ್ಕಾರ ಆರ್ಥಿಕ ಪ್ಯಾಕೇಜ್ ಕೊಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಹಾಗೂ ರಾಜ್ಯದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ರಾಜ್ಯದ ಸಮಸ್ಯೆಗೆ ಸಂಸದರು ಕೆಲಸ ಮಾಡಬೇಕು.
ಕೇಂದ್ರ ನಮ್ಮನ್ನ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ನಮ್ಮ ಸಂಸದರಿಗೆ ಪ್ರತಿಭಟನೆ ಮಾಡುವ ಧೈರ್ಯವಿಲ್ಲ. ರಾಜ್ಯದ ಪರ ಸಂಸದರು ಧ್ವನಿ ಎತ್ತಬೇಕು.
ಮೋದಿ ಅವರಿಗೆ ಎಷ್ಟು ಜನ ಮಂತ್ರಿ ಇದ್ದಾರೆ ಅಂತ ಗೊತ್ತಿಲ್ಲ. ಅನೇಕ ಕೇಂದ್ರ ಸಚಿವರೇ ಕಾಣೆಯಾಗಿದ್ದಾರೆ. ರಾಜ್ಯಕ್ಕಾಗಿ ನಮ್ಮ ಸಂಸದರು ಪ್ರತಿಭಟನೆ ಮಾಡಿ ನಮ್ಮ ರಾಜ್ಯದ ಪರ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.









