ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕು ಭಾರತದಲ್ಲಿ ಕಾಣಿಸಿಕೊಂಡಾಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಮಂಗಳೂರು ಕೂಡ ಕೊರೋನಾ ಹಾಟ್ ಸ್ಪಾಟ್ ನಲ್ಲಿ ಒಂದಾಗಿತ್ತು. 13 ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿತ್ತು. ನೆರೆಯ ಗಡಿ ರಾಜ್ಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಏರಿಕೆ ಕಾಣುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ದಕ್ಷಿಣ ಕನ್ನಡ ಮಂದಿಯ ನಿದ್ದೆಗೆಡಿಸಿತ್ತು. ಕೂಡಲೇ ಎಚ್ಚೆತ್ತ ಜಿಲ್ಲಾಡಳಿತ ರಾಜ್ಯ ಸರ್ಕಾರದ ಆದೇಶದಂತೆ ಗಡಿ ಪ್ರದೇಶದ ಪ್ರವೇಶವನ್ನು ನಿಷೇಧಿಸಿ ಹೊರ ರಾಜ್ಯದ ಜನರು ಜಿಲ್ಲೆಗೆ ಪ್ರವೇಶಿಸುವುದನ್ನು ನಿರ್ಬಂಧಿಸಿತು. ಇಲ್ಲಿನ ಪ್ರಜ್ಞಾವಂತ ಜನರು ಸರ್ಕಾರದ ಆದೇಶ ಪಾಲಿಸಿ ಅನಗತ್ಯವಾಗಿ ಮನೆಯಿಂದ ಹೊರಬರದೆ, ಹೊರ ಬರಲೇಬೇಕಾದ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಇತರ ಜಿಲ್ಲೆಯವರಿಗೆ ಮಾದರಿಯಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಕೇವಲ ಓರ್ವ ಮಾತ್ರ ಕೊರೋನಾ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದು, 12 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಅದ್ಭುತವಾದ ಸಹಕಾರದಿಂದ ಜಿಲ್ಲೆಯಲ್ಲಿ 12 ಕೊರೊನಾ ಪ್ರಕರಣಗಳು ದೃಢಪಟ್ಟ ನಂತರ ಸತತ 12ನೇ ದಿನದವರೆಗೆ ಯಾವ ಕೊರೊನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ 13ನೇ ದಿನ ದೆಹಲಿಯಿಂದ ಹಿಂತಿರುಗಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಆ ವ್ಯಕ್ತಿ ವೆನ್ ಲಾಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವವರ ಪೈಕಿ 15 ಮಂದಿ ಬಿಡುಗಡೆಗೊಂಡಿದ್ದು, ಇದುವರೆಗೆ 5485 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಪೂರೈಸಿದ್ದಾರೆ. ಇವರಲ್ಲಿ ಯಾರಿಗೂ ಕೊರೊನಾ ಸೋಂಕು ಕಂಡು ಬಂದಿಲ್ಲ. ಶುಕ್ರವಾರದಂದು ಸುಮಾರು 90 ಮಂದಿಯ ಪರೀಕ್ಷಾ ವರದಿ ಲಭ್ಯವಾಗಿದ್ದು 89 ಮಂದಿಯ ವರದಿ ನೆಗೆಟಿವ್ ಎಂದು ಬಂದಿದ್ದು, ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಉಡುಪಿ ಜಿಲ್ಲೆಯಲ್ಲಿ ಮೂರು ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟ ಬಳಿಕ ಅವರಿಂದ ಸಂಪರ್ಕಕ್ಕೆ ಒಳಗಾದ ಯಾರಿಗೂ ಸೋಂಕು ತಗಲದಂತೆ ನೋಡಿ ಕೊಳ್ಳಲಾಗಿತ್ತು. ಇದರಿಂದ ಉಡುಪಿ ಆರೆಂಜ್ ಝೋನ್ ಆಗಿ ಗುರುತಿಸಿ ಕೊಂಡಿತು. ಈಗಾಗಲೇ ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಗುಣಮುಖರಾಗಿದ್ದು, ಮತ್ತೊಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಷ್ಟೇ ಅಲ್ಲ ಉಡುಪಿಯಲ್ಲಿ ಸತತ 18 ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ ಮತ್ತು 28 ದಿನಗಳು ಇದೇ ರೀತಿ ಮುಂದುವರಿದರೆ ಉಡುಪಿ ಕೊರೊನಾ ಮುಕ್ತ ಜಿಲ್ಲೆ ಆಗಲಿದೆ.
ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಆದೇಶ ಮಾತ್ರ ಸಾಕಾಗದು, ತಮ್ಮ ಜವಾಬ್ದಾರಿಯನ್ನು ಅರಿತು ಅದನ್ನು ಪಾಲಿಸುವಂತ ಪ್ರಜ್ಞಾವಂತ ಜನರ ಸಹಕಾರ ಕೂಡ ಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಂದಿ ಸಾಬೀತು ಮಾಡಿದ್ದಾರೆ. ಕೊರೊನಾ ಹಾಟ್ ಸ್ಪಾಟ್ ನಿಂದ ಕೊರೊನಾ ಶೂನ್ಯ ಪ್ರಕರಣ ದತ್ತ ಹೆಜ್ಜೆ ಹಾಕಿರುವ ದಕ್ಷಿಣ ಕನ್ನಡ ಮತ್ತು ಆರೆಂಜ್ ಝೋನ್ ನಿಂದ ಕೊರೊನಾ ಮುಕ್ತ ಜಿಲ್ಲೆಯತ್ತ ಮುಖ ಮಾಡಿರುವ ಉಡುಪಿ, ಬುದ್ದಿವಂತರ ಜಿಲ್ಲೆ ಎಂಬ ಹೆಸರನ್ನು ಸಾರ್ಥಕಗೊಳಿಸಿದೆ.








