ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ನಾಳೆ ನಿರ್ಧಾರ
ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆಯ ಬಗ್ಗೆ ನಾಳೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಲಾಕ್ ಡೌನ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ 14 ದಿನ ಕಠಿಣ ಮಾರ್ಗಸೂಚಿ ಒಳಗೊಂಡ ಕೊರೊನಾ ಲಾಕ್‍ಡೌನ್ ಇನ್ನು ಮೂರು ದಿನದಲ್ಲಿ ಮುಗಿಯಲಿದೆ.
ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ನಾಳೆ ನಿರ್ಧಾರ ಪ್ರಕಟಿಸಲಾಗುತ್ತದೆ. ಇಂದು ಸಂಜೆ ಸಚಿವರ ಸಭೆ ಕರೆದಿದ್ದೇನೆ.
ಲಾಕ್ಡೌ ನ್ ವಿಸ್ತರಣೆ ಕುರಿತು ಸಂಜೆ ಚರ್ಚೆ ಮಾಡಲಾಗುತ್ತದೆ. ಲಾಕ್ ಡೌನ್ ಜವಾಬ್ದಾರಿ ಹೊತ್ತ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ನಂತರ ವಿಸ್ತರಣೆ ಕುರಿತು ನಾಳೆ ತೀರ್ಮಾನ ಮಾಡುತ್ತೇವೆ ಎಂದರು.
ಇನ್ನು ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚುತ್ತಿದೆ.
ಪ್ರಧಾನಿಗಳು ಈಗಾಗಲೇ ಜಿಲ್ಲಾಧಿಕಾರಿಗಳ ಸಭೆ ಕರೆದು ಮಾತನಾಡಿದ್ದಾರೆ. ಅನೇಕ ಸೂಚನೆ ಕೊಟ್ಟು ತಹಬದಿಗೆ ತರಲು ಓಡಾಡುತ್ತಿದ್ದಾರೆ.
ರಾಜ್ಯದಲ್ಲಿಯೂ ನಾವು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.









