ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ – ವೇಳಾಪಟ್ಟಿ ಬದಲಿಸಲು ಬಿಸಿಸಿಐ ಹೇಳಿಲ್ಲ
ಕೋವಿಡ್ ಸೋಂಕಿನಿಂದಾಗಿ ಬಿಸಿಸಿಐಗೆ ಭಾರೀ ನಷ್ಟವಾಗಿದೆ.14ನೇ ಆವೃತ್ತಿಯ ಐಪಿಎಲ್ ಟೂರ್ನಿ ಸ್ಥಗಿತಗೊಂಡಿರುವ ಕಾರಣ ಬಿಸಿಸಿಐಗೆ ಸುಮಾರು 2500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಆದ್ರೆ ಈ ನಷ್ಟವನ್ನು ಭರಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಆದ್ರೆ ಬಿಸಿಸಿಐ ಮಾಸ್ಟರ್ ಪ್ಲಾನ್ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದಂತೆ ಐಪಿಎಲ್ ಟೂರ್ನಿಯನ್ನು ಆಡಿಸುವ ಚಿಂತನೆ ಬಿಸಿಸಿಐ ಮುಂದಿದೆ. ಇನ್ನುಳಿದ 31 ಪಂದ್ಯಗಳನ್ನು ಆಡಿಸಿ ನಷ್ಟವನ್ನು ಸರಿದೂಗಿಸುವ ಲೆಕ್ಕಚಾರದಲ್ಲಿದೆ ಬಿಸಿಸಿಐ
ಆದ್ರೆ ಬಿಸಿಸಿಐನ ಈ ಲೆಕ್ಕಚಾರಕ್ಕೆ ಐಸಿಸಿ ವೇಳಾಪಟ್ಟಿ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದೆ. ಯಾಕಂದ್ರೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಂತರ ಟೀಮ್ ಇಂಡಿಯಾ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ನಂತರ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಆಡಲಿದೆ.
ಹೀಗಾಗಿ ಐಪಿಎಲ್ ಟೂರ್ನಿ ಮತ್ತೆ ಮುಂದುವರಿಸಿದ್ರೆ ಇಸಿಬಿ ತನ್ನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದೆ.
ಆದ್ರೆ ಬಿಸಿಸಿಐ ಈ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಈ ನಡುವೆ, ಬ್ರಿಟಿಷ್ ಪತ್ರಿಕೆಯೊಂದು ಟೆಸ್ಟ್ ಸರಣಿಯನ್ನು ಮುಂದೂಡುವಂತೆ ಬಿಸಿಸಿಐ ಇಸಿಬಿಗೆ ಮನವಿ ಮಾಡಿದೆ ಎಂದು ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಇಸಿಬಿ, ನಾವು ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದೇವೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಬಿಸಿಸಿಐ ಮನವಿ ಮಾಡಿಲ್ಲ. ಹೀಗಾಗಿ ನಿಗದಿತ ವೇಳಾಪಟ್ಟಿಯಂತೆ ಟೆಸ್ಟ್ ಸರಣಿ ನಡೆಯಲಿದೆ ಎಂದು ಹೇಳಿದೆ.
ಇನ್ನೊಂದೆಡೆ ಬಿಸಿಸಿಐ ಕೂಡ ಸ್ಪಷ್ಟನೆ ನೀಡಿದೆ. ಬಿಸಿಸಿಐ ಪದಾಧಿಕಾರಿಯ ಪ್ರಕಾರ, ಐಪಿಎಲ್ ಟೂರ್ನಿಯನ್ನು ಮುಂದುವರಿಸುವ ಚಿಂತನೆ ಬಿಸಿಸಿಐಗಿದೆ. ಈ ಬಗ್ಗೆ ಸ್ಪಷ್ಟ ತೀರ್ಮಾನವನ್ನು ಇನ್ನೂ ತೆಗೆದುಕೊಂಡಿಲ್ಲ. ಅಲ್ಲದೆ ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕೋವಿಡ್ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್ ಆಟಕ್ಕೂ ತೊಂದರೆಯಾಗಿದೆ. ಅಲ್ಲದೆ ಕ್ರಿಕೆಟ್ ಜಗತ್ತಿನ ದೊಡ್ಡಣ್ಣನಾಗಿರುವ ಬಿಸಿಸಿಐಗೆ ಐಪಿಎಲ್ ಟೂರ್ನಿಯನ್ನು ಹೇಗೆ ಮುಂದುವರಿಸುವುದು ಎಂಬುದೇ ದೊಡ್ಡ ಚಿಂತೆಯಾಗಿದೆ.








