ಲಾಕ್ ಡೌನ್ ಬಳಿಕ ಬೆಂಗಳೂರಿಗೆ ಬರಬೇಕಂದ್ರೆ ನೆಗಟಿವ್ ರಿಪೋರ್ಟ್ ಕಡ್ಡಾಯ
ಬೆಂಗಳೂರು : ಜೂನ್ 7 ರ ನಂತರ ಕೊರೊನಾ ಕಡಿಮೆಯಾಗದಿದ್ದರೇ ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಕೊರೊನಾ ಟೆಸ್ಟ್, ನೆಗಟಿವ್ ರಿಪೋರ್ಟ್ ಕಡ್ಡಾಯ ಮಾಡಬೇಕು ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಸಾಕಷ್ಟು ಮಂದಿ ತಮ್ಮ ಊರುಗಳನತ್ತ ಮುಖಮಾಡಿದ್ದಾರೆ. ಸದ್ಯ ರಾಜ್ಯದಲ್ಲಿ ಜೂನ್ 7ರವರೆಗೆ ಲಾಕ್ ಡೌನ್ ಮುಂದುವರಿಯಲಿದ್ದು, ನಂತರ ಏನು ಎನ್ನುವುದು ತಿಳಿದು ಬಂದಿಲ್ಲ.
ಒಂದು ವೇಳೆ ಜೂನ್ ಏಳಕ್ಕೆ ಲಾಕ್ ಡೌನ್ ತೆರವಾದರೇ ಮತ್ತೆ ಊರಿನಿಂದ ಬೆಂಗಳೂರಿಗೆ ವಲಸೆ ಆರಂಭವಾಗಲಿದೆ. ಈ ವೇಳೆ ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಕೊರೊನಾ ಟೆಸ್ಟ್ ಕಡ್ಡಾಯ ಮಾಡಿ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇದಕ್ಕೆ ಪ್ರಮುಖ ಕಾರಣವೇನಂದ್ರೆ ಸದ್ಯ ನಗರದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಆದ್ರೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುತ್ತಿದೆ. ಜೂನ್ ಏಳರ ಬಳಿಕ ಜನರು ಮತ್ತೆ ನಗರಕ್ಕೆ ವಾಪಸ್ ಆದ್ರೆ ಜನರ ಓಡಾಟ ಹೆಚ್ಚಾಗುತ್ತದೆ.
ಆಗ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಜಾಸ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ರೀತಿ ಆಗದಂತೆ ತಡೆಯಲು ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಆರಂಭದಲ್ಲೇ ಕೊರೊನಾ ಪರೀಕ್ಷೆ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.










