ಸಚಿನ್ ಬದುಕಿನ ಆ ಎರಡು ವಿಷಾದಗಳು..! ಅದಕ್ಕೆ ಕಾರಣ ಗವಾಸ್ಕರ್ ಮತ್ತು ವಿವಿಯನ್ ರಿಚರ್ಡಸನ್..!
ಅದು 24 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕು.. 200 ಟೆಸ್ಟ್ ಪಂದ್ಯ… 463 ಏಕದಿನ ಪಂದ್ಯ … ಟೆಸ್ಟ್ ಕ್ರಿಕೆಟ್ ನಲ್ಲಿ 15921 ರನ್… ಏಕದಿನ ಕ್ರಿಕೆಟ್ ನಲ್ಲಿ 18426 ರನ್… 51 ಟೆಸ್ಟ್ ಶತಕಗಳು.. 49 ಏಕದಿನ ಶತಕಗಳು… ಒಂದು ವಿಶ್ವಕಪ್ ಕಿರೀಟ.. ನಂಬರ್ ವನ್ ಟೆಸ್ಟ್ ತಂಡದ ಆಟಗಾರ… ಕ್ರಿಕೆಟ್ ಜಗತ್ತಿನ ಹಲವು ದಾಖಲೆಗಳ ಒಡೆಯ.. ಮೈದಾನದಲ್ಲಿ ಮಂತ್ರಘೋಷದಂತೆ ಮೊಳಗುವ ಮೂರಕ್ಷರದ ದೇವರು… ಅಭಿಮಾನಿಗಳ ಎವರ್ ಗ್ರೀನ್ ಹೀರೋ… ಕಿಂಗ್ ಆಫ್ ಕ್ರಿಕೆಟ್.. ಗಾಡ್ ಆಫ್ ಕ್ರಿಕೆಟ್.. ಹೀಗೆ ಹಲವು ಗೌರವ, ದಾಖಲೆಗಳನ್ನು ಬರೆದ ಕ್ರಿಕೆಟ್ ಜಗತ್ತಿನ ಕ್ರಿಕೆಟ್ ಬ್ರಹ್ಮ.. ನಮ್ಮ ಹೆಮ್ಮೆಯ ಭಾರತ ರತ್ನ ಸಚಿನ್ ತೆಂಡುಲ್ಕರ್.
ನಾವು ಅಂದುಕೊಳ್ಳಬಹುದು.. ಸಚಿನ್ ತೆಂಡುಲ್ಕರ್ ಅವರದ್ದು ಪರಿಪೂರ್ಣ ಕ್ರಿಕೆಟ್ ಬದುಕು ಅಂತ. ಆದ್ರೆ ಸಚಿನ್ ಪರಿಪೂರ್ಣ ಕ್ರಿಕೆಟಿಗನಲ್ಲ. ವರ್ಣರಂಚಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರೂ ಸಚಿನ್ ತೆಂಡುಲ್ಕರ್ ಗೆ ಇನ್ನೂ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಕ್ರಿಕೆಟ್ ನಲ್ಲಿ ಇನ್ನೂ ಕಲಿಯುತ್ತಿರುವ ಹುಡುಗ ಅಂತನೇ ಭಾವಿಸುತ್ತಿದ್ದಾರೆ.
ವಯಸ್ಸು 40 ಆಗಿದ್ರೂ ಇನ್ನೂ ಕ್ರಿಕೆಟ್ ಆಡಬೇಕು ಅನ್ನೋ ಹಂಬಲ ತುಡಿತ ತೆಂಡುಲ್ಕರ್ ನಲ್ಲಿತ್ತು. ಒಲ್ಲದ ಮನಸ್ಸಿನಿಂದಲೇ ಬಲವಂತವಾಗಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರು. ವಿದಾಯದ ಬಳಿಕ ಕುಟುಂಬದ ಜೊತೆ ಹೆಚ್ಚು ಸಮಯ ಕಾಲ ಕಳೆಯುತ್ತಿರುವ ಆಗಾಗ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದಾರೆ. ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಆಟಗಾರರಿಗೆ ಮಾರ್ಗದರ್ಶನ, ಸಲಹೆಯನ್ನೂ ನೀಡುತ್ತಿದ್ದಾರೆ.
ಆದ್ರೂ ಸಚಿನ್ ತೆಂಡುಲ್ಕರ್ ಗೆ ಕ್ರಿಕೆಟ್ ಬದುಕಿನಲ್ಲಿ ಏನೋ ಕಳೆದುಕೊಂಡಂತೆ ಭಾಸವಾಗುತ್ತಿದ್ದಂತೆ. ಹೌದು, ಸಚಿನ್ ತೆಂಡುಲ್ಕರ್ ಅವರಿಗೆ ತನ್ನ ಕ್ರಿಕೆಟ್ ಬದುಕಿನ ಬಗ್ಗೆ ಎರಡು ವಿಷಾದಗಳಿವೆಯಂತೆ. ಅಚ್ಚರಿಯಾಗಬೇಡಿ. ಇದು ಸತ್ಯ. ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಈ ಮಾತನ್ನು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಸಚಿನ್ ತೆಂಡುಲ್ಕರ್ ಅವರ ವಿಷಾದಕ್ಕೆ ಕಾರಣ ಒಂದು ಸುನೀಲ್ ಗವಾಸ್ಕರ್ ಮತ್ತೊಂದು ಸರ್ ವಿವಿಯನ್ ರಿಚರ್ಡಸನ್.
ಅಂದ ಹಾಗೇ ಸುನೀಲ್ ಗವಾಸ್ಕರ್ ಅವರು ಸಚಿನ್ ತೆಂಡುಲ್ಕರ್ ಅವರ ಪ್ರೀತಿಯ ಕ್ರಿಕೆಟಿಗ. ಗವಾಸ್ಕರ್ ಆಟವನ್ನು ನೋಡಿಕೊಂಡೇ ಬೆಳೆದುಬಂದವರು ಸಚಿನ್ ತೆಂಡುಲ್ಕರ್. ಹಾಗೇ ಸರ್ ವಿವಿಯನ್ ರಿಚರ್ಡಸನ್. ಸಚಿನ್ ತೆಂಡುಲ್ಕರ್ ಅವರ ಬಾಲ್ಯದ ನೆಚ್ಚಿನ ಹೀರೋ. ಹೀಗಾಗಿ ಸಚಿನ್ ಅವರನ್ನು ಸದಾ ಕಾಡುತ್ತಿರುವ ಕೊರಗು ಏನು ಅಂದ್ರೆ ಇವರಿಬ್ಬರ ಜೊತೆಯಾಗಿ ಆಡಲಿಲ್ಲ ಎಂಬುದು.
ಸುನೀಲ್ ಗವಾಸ್ಕರ್ ಜೊತೆಯಾಗಿ ಆಡಲಿಲ್ಲ ಎಂಬ ಬೇಸರ ಒಂದು ಕಡೆಯಾದ್ರೆ, ರಿಚರ್ಡಸನ್ ವಿರುದ್ಧವಾಗಿ ಆಡಲಿಲ್ಲ ಅನ್ನೋ ನೋವು ಸಚಿನ್ ಅವರನ್ನು ಈಗಲೂ ಕಾಡುತ್ತಿದೆಯಂತೆ.
ಸುನೀಲ್ ಗವಾಸ್ಕರ್ ಅವರು, ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಡುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಹೀಗಾಗಿ ಗವಾಸ್ಕರ್ ಜೊತೆಯಾಗಿ ಆಡುವ ಅವಕಾಶವೇ ಸಿಗಲಿಲ್ಲ.
ಇನ್ನು ಸರ್ ವಿವಿಯನ್ ರಿಚರ್ಡಸನ್ ಅವರು 1991ರಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಆಗ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸಲು ಶುರು ಮಾಡಿದ್ದರು. ಆದ್ರೆ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಸಚಿನ್ ರಿಚರ್ಡಸನ್ ವಿರುದ್ಧ ಆಡಲು ಸಾಧ್ಯವಾಗಲಿಲ್ಲ.
ಹೀಗೆ ಸಚಿನ್ ತೆಂಡುಲ್ಕರ್ ತಮ್ಮ ಕ್ರಿಕೆಟ್ ಬದುಕಿನ ಎರಡು ವಿಷಾದದ ಬಗ್ಗೆ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಸಚಿನ್ ತೆಂಡುಲ್ಕರ್ ಎಷ್ಟೇ ಸಾಧನೆ ಮಾಡಿದ್ರೂ ಏನಾದ್ರೂ ತನ್ನ ಕ್ರಿಕೆಟ್ ಬದುಕು ಪರಿಪೂರ್ಣವಾಗಿಲ್ಲ ಅಂತ ಹೇಳುತ್ತಿರುತ್ತಾರೆ. ಈ ಸಾಧಕರೇ ಬದುಕು ಹಾಗೇ..ಒಂಥರ ವಿಚಿತ್ರವಾಗಿರುತ್ತದೆ.