ಸದ್ಯಕ್ಕೆ ಬಿಎಂಟಿಸಿ ಪ್ರಯಾಣ ದರ ಏರಿಕೆ ಇಲ್ಲ : ಸವದಿ
ಬೆಂಗಳೂರು : ಲಾಕ್ ಡೌನ್ ಮುಗಿಯುತ್ತಿದ್ದಂತೆ ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡಲಾಗುವುದು ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ್ ಸವದಿ ಸದ್ಯಕ್ಕೆ ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಕೆಟ್ ದರ ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ನಾಲ್ಕೂ ನಿಗಮಗಳು ದರ ಹೆಚ್ಚಳದ ಪ್ರಸ್ತಾವನೆ ಸಲ್ಲಿಸಿತ್ತು.
ಆವಾಗ ಬಿಎಂಟಿಸಿ ದರ ಹೆಚ್ಚಳ ಮಾಡಿಲ್ಲವೆಂದು ಶೇ.15 ರಷ್ಟು ದರ ಹೆಚ್ಚಿಸುವಂತೆ ಸಂಸ್ಥೆ ಕೋರಿದೆ. ಆದರೆ ಕೋವಿಡ್ ಪರಿಸ್ಥಿತಿ, ಲಾಕ್ ಡೌನ್ ನಿಂದ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ.
ಇಂತಹ ಸಂಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ತೊಂದರೆ ಕೊಡುವ ಕೆಲಸ ಸರ್ಕಾರ ಮಾಡುವುದಿಲ್ಲ ಎಂದು ಹೇಳುವ ಮೂಲಕ ಬಿಎಂಟಿಸಿ ಟಿಕೆಟ್ ದರ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಬಸ್ ಕಾರ್ಯಚರಣೆ ಬಗ್ಗೆ ಮಾತನಾಡಿ, ಲಾಕ್ ಡೌನ್ ಮುಗಿದ ಬಳಿಕ ಹಂತ ಹಂತವಾಗಿ ಬಸ್ ಕಾರ್ಯಾಚರಣೆ ಆರಂಭಿಸಲಾಗುವುದು.
ಸಂಸ್ಥೆಯ ಸಿಬ್ಬಂದಿಗೆ ಲಸಿಕೆ ಕೊಡುವ ಕಾರ್ಯ ಆರಂಭವಾಗಿದೆ. ಎರಡೂ ಡೋಸ್ ಪಡೆದವರನ್ನು ಮಾತ್ರ ಕರ್ತವ್ಯಕ್ಕೆ ಬಳಸಲಾಗುವುದು ಎಂದು ಹೇಳಿದರು.









