ಹುಸಿಯಾಗದ ನಿರೀಕ್ಷೆ.. ಟೀಕೆಗಳಿಗೆ ದಿಟ್ಟ ಉತ್ತರ – ಇದು ರಿಷಬ್ ಪಂತ್ ಬೆಳೆದು ಬಂದ ಹಾದಿ..!
ರಿಷಬ್ ಪಂತ್.. ಫಿಯರ್ ಲೆಸ್ ಕ್ರಿಕೆಟಿಗನೂ ಹೌದು.. ಕ್ಯಾರ್ ಲೆಸ್ ಕ್ರಿಕೆಟರ್ ಕೂಡ ಹೌದು. ಅದೇ ರೀತಿ ಅದ್ಭುತ ಪ್ರತಿಭೆ ಇದೆ. ಆದ್ರೆ ಅದನ್ನು ಬಳಸಿಕೊಳ್ಳುತ್ತಿರುವ ರೀತಿಯಲ್ಲಿ ವ್ಯತ್ಯಾಸವಿದೆ. ಇದು ರಿಷಬ್ ಪಂತ್ ಅವರ ವೀಕ್ ನೆಸ್.
ಹೊಡಿಬಡಿ ಆಟವೇ ರಿಷಬ್ ಪಂತ್ ನ ಮೂಲ ಮಂತ್ರ. ಆದ್ರೆ ತಾಳ್ಮೆಯನ್ನು ಮೈಗೂಡಿಸಿಕೊಂಡಿಲ್ಲ. ಹೀಗಾಗಿಯೇ ಅವರಿಗೆ ಕೈಕೊಡುತ್ತಿದೆ ಬ್ಯಾಟಿಂಗ್ ತಂತ್ರ. ಕ್ರೀಸ್ ಗೆ ಅಂಟಿಕೊಂಡ್ರೆ ಪಂತ್ ಮ್ಯಾಚ್ ವಿನ್ನರ್.. ಆದ್ರೆ ಕೆಟ್ಟ ಹೊಡೆತಗಳಿಗೆ ಮುಂದಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಆಗುತ್ತಿದ್ದಾರೆ ವಿಲನ್.
ನಿಜ, ರಿಷಬ್ ಪಂತ್ ಅನ್ನೋ ಯುವ ಬ್ಯಾಟ್ಸ್ ಮೆನ್ ಕಮ್ ವಿಕೆಟ್ ಕೀಪರ್ ಟೀಮ್ ಇಂಡಿಯಾದ ಆಸ್ತಿ, ಆದ್ರೆ ಸಿಕ್ಕ ಅವಕಾಶಗಳನ್ನು ಮಾತ್ರ ಕೈಚೆಲ್ಲಿಕೊಂಡು ಈಗ ಬುದ್ಧಿ ಕಲಿಯುತ್ತಿದ್ದಾರೆ. ಜೊತೆಗೆ ಟೀಮ್ ಇಂಡಿಯಾ ಭವಿಷ್ಯದ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ.
ಟೀಮ್ ಇಂಡಿಯಾಗೆ ಎಂಟ್ರಿಯಾದಾಗ ರಿಷಬ್ ಪಂತ್ ಅದೃಷ್ಟವಂತ ಅಂತನೇ ಹೇಳುತ್ತಿದ್ರು. ಆದ್ರೆ ಆಗ ರಿಷಬ್ ಪಂತ್ ಅದಕ್ಕೆ ತಕ್ಕಂತೆ ಆಡಲಿಲ್ಲ. ಪರಿಸ್ಥಿತಿಯನ್ನು ಅರಿತುಕೊಂಡು ಆಡುವ ಕಲೆ ಗೊತ್ತಿದ್ರೂ ಕೂಡ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸುತ್ತಿದ್ದರು. ಹೀಗಾಗಿ ನಿರಾಸೆಯಿಂದಲೇ ಪೆವಿಲಿಯನ್ ದಾರಿ ಹಿಡಿಯುತ್ತಿದ್ರು.
ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಾಗ ರಿಷಬ್ ಪಂತ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಅದಕ್ಕೆ ತಕ್ಕಂತೆ ಆಟವನ್ನು ಆಡುವ ಸಾಮಥ್ರ್ಯವಿತ್ತು. ಅದೂ ಅಲ್ಲದೆ 2019ರ ವಿಶ್ವಕಪ್ ಟೂರ್ನಿಗೂ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಆದ್ರೆ ಮಹತ್ವದ ಪಂದ್ಯದಲ್ಲಿ ಕೈಕೊಟ್ಟು ಬಿಟ್ಟರು. ಆದ್ರೂ ಆಯ್ಕೆ ಸಮಿತಿ ಮತ್ತು ಟೀಮ್ ಇಂಡಿಯಾದ ಮ್ಯಾನೇಜ್ ಮೆಂಟ್ ವೆಸ್ಟ್ ಇಂಡೀಸ್ ಸರಣಿಯಲ್ಲೂ ಅವಕಾಶ ನೀಡಿತ್ತು. ಅಲ್ಲೂ ಕೂಡ ರಿಷಬ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ.
ನಂತರ ದಕ್ಷಿಣ ಆಫ್ರಿಕಾ ವಿರುದ್ದದ ಟಿ-ಟ್ವೆಂಟಿ ಪಂದ್ಯಗಳಲ್ಲೂ ಕೆಟ್ಟ ಹೊಡೆತಗಳಿಗೆ ಮುಂದಾಗಿ ನಿರಾಸೆ ಅನುಭವಿಸಿದ್ರು. ಅಲ್ಲದೆ ಕ್ರಿಕೆಟ್ ಪಂಡಿತರ ಟೀಕೆಗಳಿಗೂ ಗುರಿಯಾದ್ರು. ಆದ್ರೂ ಟೀಮ್ ಮ್ಯಾನೇಜ್ ಮೆಂಟ್ ಮತ್ತು ಆಯ್ಕೆ ಸಮಿತಿ ಟೆಸ್ಟ್ ತಂಡದಲ್ಲಿ ಅಡುವ ಅವಕಾಶ ಕಲ್ಪಿಸಿತ್ತು. ಆದ್ರೂ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ.
ಹೀಗಾಗಿ ರಿಷಬ್ ಪಂತ್ ಟೀಮ್ ಇಂಡಿಯಾದಿಂದ ಹೊರಗುಳಿದ್ರು. ರಿಷಬ್ ಪಂತ್ ಬದಲು ಕೆ.ಎಲ್. ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಿದ್ದರು.
ಆದ್ರೆ ರಿಷಬ್ ಪಂತ್ ಸುಮ್ಮನೆ ಕೂರಲಿಲ್ಲ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಸುರೇಶ್ ರೈನಾ ಜೊತೆ ಸೇರಿಕೊಂಡು ಅಭ್ಯಾಸದಲ್ಲಿ ನಿರತರಾಗಿದ್ದರು. ವಿಕೆಟ್ ಕೀಪಿಂಗ್ ಟೆಕ್ನಿಕ್ ಗಳನ್ನು ಸುಧಾರಿಸಿಕೊಂಡ್ರು. ಫಿಟ್ ನೆಸ್ ಕಡೆಗೂ ಗಮನಹರಿಸಿದ್ರು. ಬ್ಯಾಟಿಂಗ್ ಲಯ ಕಂಡುಕೊಂಡ್ರು. ಪರಿಣಾಮ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾದ್ರು.
ಆನಂತರ ಹಿಂತಿರುಗಿ ನೋಡಲೇ ಇಲ್ಲ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಷಬ್ ಪಂತ್ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ರೂಪುಗೊಂಡ್ರು.
ಆದಾದ ನಂತರ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರಿಷಬ್ ಪಂತ್ ಅದ್ಭುತವಾದ ಪ್ರದರ್ಶನವನ್ನು ನೀಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡ್ರು. ಹಾಗೇ ಐಪಿಎಲ್ ನಲ್ಲಿ ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡು ಸಮರ್ಥವಾಗಿ ಜವಾಬ್ದಾರಿಯನ್ನು ನಿಭಾಯಿಸಿದ್ರು.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೂ ಆಯ್ಕೆಯಾಗಿರುವ ರಿಷಬ್ ಪಂತ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವಿಶ್ವದ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಕೂಡ ರಿಷಬ್ ಪಂತ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಫಿದಾ ಆಗಿದ್ದಾರೆ.
ಒಟ್ಟಿನಲ್ಲಿ ರಿಷಬ್ ಪಂತ್ ತನ್ನ ಮೇಲೆ ಮಾಡಿರುವ ಟೀಕೆಗಳಿಗೆ ಸೈಲೆಂಟ್ ಆಗಿಯೇ ಉತ್ತರ ನೀಡಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಪ್ರಬುದ್ಧತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಆದ್ರೆ ಹೊಡಿಬಡಿ ಆಟದ ಸೂತ್ರವನ್ನಿಟ್ಟಿಕೊಂಡಿರುವ ರಿಷಬ್ ಪಂತ್ ಕೆಟ್ಟ ಹೊಡೆತಗಳಿಗೆ ಮುಂದಾಗಿ ವಿಕೆಟ್ ಕೈಚೆಲ್ಲಿಕೊಳ್ಳುತ್ತಿದ್ದಾರೆ. ಇದನ್ನು ಸರಿಪಡಿಸಿಕೊಂಡ್ರೆ ರಿಷಬ್ ಪಂತ್ ಗೆ ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಸಿಗಬಹುದು. ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗುವ ಎಲ್ಲಾ ಅವಕಾಶಗಳು ದಟ್ಟವಾಗಿವೆ.








