ವಿಧಾನಸೌಧದ ಮುಂದೆ ಹೆಚ್.ಡಿ.ದೇವೇಗೌಡರ ಮೂರ್ತಿ : ಇಬ್ರಾಹಿಂ
ಬೆಂಗಳೂರು : ದೇಶಕ್ಕೆ ಮತ್ತು ರಾಜ್ಯಕ್ಕೆ ಅವರು ಮಾಡಿದ ಕೆಲಸ ದೊಡ್ಡದಿದೆ. ವಿಧಾನಸೌಧದ ಮುಂದೆ ದೇವೇಗೌಡರ ಮೂರ್ತಿ ಇರಿಸಬೇಕು ಎಂದು ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ ಡಿ ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಯುವಜನತೆಗೆ ಗೊತ್ತಿಲ್ಲದ ದೇವೇಗೌಡರ ಪರಿಚಯ’ ಕುರಿತು ವಿಡಿಯೋ ಸಂವಾದ ಆಯೋಜಿಸಿತ್ತು.
ಇದರಲ್ಲಿ ಹೆಚ್ ಡಿ ದೇವೇಗೌಡರ ಗುಣಗಾನ ಮಾಡಿದ ಸಿ.ಎಂ.ಇಬ್ರಾಹಿಂ, ನಾಡು ಕಂಡ ಅಪರೂಪದ ರಾಜಕಾರಣಿ, ಪ್ರಾಮಾಣಿಕ, ಜನಸಾಮಾನ್ಯರ, ರೈತರ, ಸರ್ವ ಜನಾಂಗದ ಶಾಂತಿಯ ತೋಟದ ರೂವಾರಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು.
ದೇವೇಗೌಡರು ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ಇತಿಹಾಸ ಸೃಷ್ಟಿಸಿದರು. ಮುಂದೆ ಕೆಂಪುಕೋಟೆ ಮೇಲೆ ಧ್ವಜ ಯಾರೂ ಹಾರಿಸುತ್ತಾರೋ ಗೊತ್ತಿಲ್ಲ ಎಂದರು.
ಇನ್ನು ದೇವೇಗೌಡರು ಪ್ರಧಾನಿಯಾಗಿ ಚೀನಾ, ಪಾಕಿಸ್ತಾನದ ಜೊತೆ ಬಾಂಧವ್ಯ ಏರ್ಪಡಿಸಿದ್ದರು. ಕಾಶ್ಮೀರಕ್ಕೆ ಹೋಗಿ ಚುನಾವಣೆ ಮಾಡುವ ಮೂಲಕ ಇಡೀ ದೇಶ ನಿಬ್ಬೆರಗಾಗುವಂತೆ ಮಾಡಿದರು.
ಭಯೋತ್ಪಾಕ ಗುಂಪಿನ ಸದಸ್ಯನೊಬ್ಬನನ್ನು ಶಾಸಕನನ್ನಾಗಿ ಮಾಡಿದರು. ಅವರ ಧೈರ್ಯವನ್ನು ಮೆಚ್ಚಲೇ ಬೇಕು. ರೈತರಿಗೆ ಶೇ.30ರಷ್ಟು ಸಬ್ಸಿಡಿ, ಟ್ರ್ಯಾಕ್ಟರ್ ಸಬ್ಸಿಡಿ ನೀಡಿ ನೆರವಾಗದರು.
ಪಂಜಾಬ್ ನಲ್ಲಿ ಒಂದು ತಳಿಗೆ ದೇವೇಗೌಡರ ಹೆಸರು ಇಟ್ಟಿದ್ದಾರೆ. ಯಾವುದೇ ವಿವಾದಗಳಿಲ್ಲದ ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದರೆ ದೇವೇಗೌಡರು.
ಅವರು ದೇಶಕ್ಕೆ ಮತ್ತು ರಾಜ್ಯಕ್ಕೆ ಮಾಡಿದ ಕೆಲಸ ದೊಡ್ಡದಿದೆ. ಹೀಗಾಗಿ ವಿಧಾನಸೌಧದ ಮುಂದೆ ದೇವೇಗೌಡರ ಮೂರ್ತಿ ಇರಿಸಬೇಕು ಎಂದು ಇಬ್ರಾಹಿಂ ಹೆಚ್ ಡಿಡಿ ಅವರ ಗುಣಗಾನ ಮಾಡಿದರು.









