ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಅನೇಕ ಮನ ಕಲಕುವ ಘಟನೆಗಳು ನಡೆಯುತ್ತಿದೆ. ಎಂದಿನಂತೆ ಸುದ್ದಿಗಳತ್ತ ಕಣ್ಣಾಡಿಸಿದಾಗ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ್ ಅವರ ತಂದೆ ಮರಣ ಹೊಂದಿದರೆಂಬ ಸುದ್ದಿ ಗಮನ ಸೆಳೆಯಿತು. ತಾನು ತಂದೆಯ ಅಂತಿಮ ಮುಖ ದರ್ಶನ ಪಡೆಯಲಾಗದ ಸಂದರ್ಭಕ್ಕೆ ವಿಷಾದಿಸುತ್ತಾ ಅವರು ಕುಟುಂಬಕ್ಕೆ ಬರೆದಿರುವ ಪತ್ರ ನನ್ನನ್ನು ಭಾವುಕಳನ್ನಾಗಿಸಿತು. ತಂದೆಯ ಅಂತಿಮ ಮುಖ ದರ್ಶನವನ್ನು ಮಾಡಲಾಗದ ವಿಷಾದ ಮಿಳಿತಗೊಂಡ ಆ ಪತ್ರದಲ್ಲಿ ಸಂತಾಪವನ್ನು ವ್ಯಕ್ತಪಡಿಸುತ್ತಾ ತಾಯಿಗೆ ಹಾಗೂ ತನ್ನ ಕುಟುಂಬದವರಿಗೆ ಹೆಚ್ಚಿನ ಜನರು ಸೇರದಂತೆ ನೋಡಿಕೊಳ್ಳಿ ಎಂಬ ಮಾತು, ಹೆಚ್ಚಿನ ಸಂಖ್ಯೆಯಲ್ಲಿ ನನ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಬೇಡಿ ಸರಕಾರದ ನಿಯಮಗಳನ್ನು ಪಾಲಿಸಿ ಎಂದು ಜನರಲ್ಲಿ ಅವರ ಮನವಿ, ಅವರೊಳಗಿನ ಜವಾಬ್ದಾರಿಯನ್ನು ಮರೆಯದ ನೇತಾರನನ್ನು ಪರಿಚಯಿಸಿತು.
ಈ ಸಂದರ್ಭದಲ್ಲಿ ಜವಾಬ್ದಾರಿಯುತ ಜನಸೇವಕನ ಸ್ಥಾನದಲ್ಲಿ ನಿಂತಿರುವ ಆದಿತ್ಯನಾಥ್ ಯೋಗಿ ಅವರ ತಂದೆಗೆ ಸಂಬಂಧ ಪಟ್ಟ ಮನಮಿಡಿಯುವ ಸನ್ನಿವೇಶವೊಂದು ನೆನಪಾಯಿತು.
ಉತ್ತರ ಪ್ರದೇಶದಲ್ಲಿ ಒಮ್ಮೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಗಮನ ಸಭೆಯಲ್ಲಿ ತನ್ನ ಭಾಷಣ ಕೇಳುತ್ತಿದ್ದ ಒಬ್ಬ ಹಿರಿಯ ವಯಸ್ಸಿನ ವ್ಯಕ್ತಿಯತ್ತ ಬಿತ್ತಂತೆ. ಕೂಡಲೇ ತಮ್ಮ ಭಾಷಣವನ್ನು ನಿಲ್ಲಿಸಿದ ಮುಖ್ಯಮಂತ್ರಿ ಆದಿತ್ಯನಾಥ್ ಮಾಸಲು ಅಂಗಿ ಪಂಚೆಯನ್ನುಟ್ಟ ಆ ಹಿರಿಯ ವಯಸ್ಸಿನ ವ್ಯಕ್ತಿಯನ್ನು ಸಭೆಗೆ ಕರೆ ತರುವಂತೆ ತಿಳಿಸಿದರಂತೆ. ಎಲ್ಲರ ಗಮನ ತನ್ನೆಡೆಗೆ ಸೆಳೆದ ಆ ಹಿರಿಯರು ಸಂಕೋಚದಿಂದ ವೇದಿಕೆಗೆ ಬಂದಾಗ ಮುಖ್ಯಮಂತ್ರಿ ಯೋಗಿಜೀ ತನ್ನ ಆಸನದಲ್ಲಿ ಅವರನ್ನು ಕುಳ್ಳಿರಿಸಿ ಅವರ ಪಾದಗಳಿಗೆ ನಮಸ್ಕರಿಸಿದರಂತೆ.
ಮುಖ್ಯಮಂತ್ರಿಗಳಿಂದ ಇಂತಹ ಗೌರವ ಪಡೆದ ವ್ಯಕ್ತಿ ಯಾರಾಗಿರಬಹುದು ಎಂದು ಜನರು ತಮ್ಮ ತಮ್ಮಲ್ಲೇ ಚರ್ಚಿಸಿದಾಗ, ಗಂಭೀರ ಅರ್ದ ಸ್ವರದಲ್ಲಿ ಇವರು ತನ್ನ ಪೂರ್ವಶ್ರಮದ ತಂದೆಯೆಂದು ಯೋಗಿಜೀ ಪರಿಚಯಿಸಿದರಂತೆ. ಸನ್ಯಾಸವನ್ನು ಸ್ವೀಕರಿಸಿರುವ ಯೋಗಿಜೀಯವರು ತನ್ನ ಪೂರ್ವ ಶ್ರಮದ ತಂದೆಯನ್ನು ಈ ರೀತಿಯಲ್ಲಿ ಪರಿಚಯಿಸಿದಾಗ, ಮಗನನ್ನು ದೂರದಿಂದ ನೋಡಲು ಇಳಿವಯಸ್ಸಿನಲ್ಲಿ ಸಾಮಾನ್ಯರಂತೆ ಬಂದಿದ್ದ ತಂದೆ ಮಗನನ್ನು ಭೇಟಿಯಾದ ಕ್ಷಣ ಎಲ್ಲರನ್ನೂ ಭಾವುಕರನ್ನಾಗಿಸಿತಂತೆ.
ರಾಜ್ಯದ ಮುಖ್ಯಮಂತ್ರಿಯಾಗಿರುವ ಮಗನ ಅಧಿಕಾರವನ್ನು ಎಲ್ಲೂ ಬಳಸದೆ ಪುತ್ರ ವಾತ್ಸಲ್ಯ ದ ತುಡಿತದಿಂದ ಧಾವಿಸಿದ ತಂದೆಗೆ ದೊರಕಿದು ಮಗನ ಭೇಟಿಯ ಆ ಅಪರೂಪದ ಕ್ಷಣ.
ಸನ್ಯಾಸಿಯಾದವರು ಪೂರ್ವಶ್ರಮದ ಸಂಬಂಧಗಳಿಗೆ ತಿಲಾಂಜಲಿಯನ್ನು ಇತ್ತು ಸನ್ಯಾಸತ್ವ ಸ್ವೀಕರಿಸುತ್ತಾರೆ. ತನ್ನ ಕುಟುಂಬ ಸಂಸಾರವೆಂಬ ವ್ಯಾಮೋಹಕ್ಕಿಂತ, ಪ್ರಜೆಗಳ ಹಿತರಕ್ಷಣೆಯೇ ಅವರ ಆದ್ಯತೆ. ತನ್ನ ಪ್ರಜೆಗಳ ಯೋಗಕ್ಷೇಮ ವನ್ನೇ ಉಸಿರಾಗಿಸಿಕೊಳ್ಳುವುದನ್ನು ರಾಜಧರ್ಮವೆಂದು ಕರೆಯುತ್ತಾರೆ. ಪುರಾಣದಲ್ಲಿ ಆದರ್ಶ ಪುರುಷನಾಗಿ ಕಾಣಿಸಿಕೊಂಡ ಶ್ರೀ ರಾಮನಲ್ಲಿ ಇಂತಹ ಗುಣಗಳನ್ನು ನಾವು ಕೇಳಿದ್ದರೆ, ಇಂದಿನ ರಾಜಕಾರಣಿಗಳಲ್ಲಿ ಇಂತಹ ಗುಣಗಳನ್ನು ಕಾಣಲು ಸಾಧ್ಯವಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥರು ನಿಜವಾದ ಅರ್ಥದಲ್ಲಿ ರಾಜಧರ್ಮ ಪಾಲಿಸಿದ್ದಾರೆ.
ತನಗೆ ಜನ್ಮ ನೀಡಿದ, ತನ್ನ ಲಾಲನೆ ಪಾಲನೆ ಮಾಡಿದ ತಂದೆಯ ಅಂತಿಮ ಕ್ಷಣದಲ್ಲಿ ಅವರ ಮುಖ ದರ್ಶನ ಮಾಡುವ ಇಚ್ಛೆ ಇದ್ದರೂ, ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ನನ್ನನ್ನು ನಂಬಿರುವ ಇಪ್ಪತ್ತಾರು ಕೋಟಿ ಜನರ ಸೇವೆಯೆ ನನ್ನ ಬದುಕಿನ ಆದ್ಯತೆ ಎಂದು ತೋರಿಸಿ ಕೊಟ್ಟಿದ್ದಾರೆ. ತಂದೆಯ ಮುಖ ನೋಡಲು ಇದೊಂದು ಕೊನೆಯ ಅವಕಾಶ, ಮುಂದೆಂದೂ ಬದುಕಲ್ಲಿ ತಂದೆಯ ಮುಖ ನೋಡಲು ಸಾಧ್ಯವಿಲ್ಲ ಎಂಬ ಕಟು ಸತ್ಯದ ನಡುವೆಯೂ ಜನರ ಹಿತದೃಷ್ಟಿಯೇ ನನ್ನ ಬದುಕಿನ ಧ್ಯೇಯ ಎಂದು ತೋರಿಸಿ ಕೊಟ್ಟಿದ್ದಾರೆ.
ಒಬ್ಬ ರಾಜ್ಯದ ನಾಯಕ ಹೇಗಿರಬೇಕು ಎನ್ನುವ ಪ್ರಶ್ನೆ ಎದುರಾದಾಗ, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದರ್ಶ ಗುಣಗಳು ನೆನಪಿಗೆ ಬರುತ್ತದೆ.
ಆದರ್ಶಗಳನ್ನು ಮಾತನಾಡುವುದು ಬಹಳ ಸುಲಭ. ಆದರೆ ಅದನ್ನು ಅನುಸರಿಸುವುದು, ಅದರಂತೆ ನಡೆದುಕೊಳ್ಳುವುದು ಸುಲಭದ ಮಾತಲ್ಲ. ಇಂದು ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂದರೆ ಒಬ್ಬ ವ್ಯಕ್ತಿಯಲ್ಲಿನ ಆದರ್ಶದ ಗುಣಗಳನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಿಲ್ಲ. ನಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾ, ಒಳ್ಳೆಯ ವ್ಯಕ್ತಿತ್ವದಲ್ಲೂ ಹುಳುಕನ್ನು ಹುಡುಕುವ ಮನಸ್ಥಿತಿ ನಮ್ಮದು.
ತನ್ನ ಪುತ್ರ ಯೋಗಿ ಆದಿತ್ಯನಾಥ್ ನಲ್ಲಿನ ಪ್ರಾಮಾಣಿಕತೆ, ಕಠೋರ ಪರಿಶ್ರಮ, ನಿಸ್ವಾರ್ಥಭಾವದಿಂದ ಸಮಾಜಕಲ್ಯಾಣಕ್ಕೆ ದುಡಿಯಬೇಕೆಂಬ ಆದರ್ಶ ಗುಣಗಳಿಗೆ ಕಾರಣಕರ್ತರಾಗಿರುವ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ..
ಓಂ ಶಾಂತಿ..








