ಬೆಂಗಳೂರು : ಕೊರೊನಾ ಹೊಡೆತಕ್ಕೆ ದೇಶ ತಲ್ಲಣಗೊಂಡಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಕೊರೊನಾ ವಿರುದ್ಧ ಹೋರಾಡಲು ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕೃತವಾಗಿಯೇ ಮನವಿ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಅವರ ಮನವಿಗೆ ಪ್ರತಿಪಕ್ಷಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ.
ಸಿಎಂ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರು. ಆದ್ರೆ ಕಾಂಗ್ರೆಸ್ ತನ್ನ ಪಕ್ಷದ ಎಲ್ಲಾ ಶಾಸಕರು ಕಾಂಗ್ರೆಸ್ ಪರಿಹಾರ ನಿಧಿಗೆ ತಲಾ ಒಂದು ಲಕ್ಷ ರೂ. ದೇಣಿಗೆ ನೀಡುವಂತೆ ಸೂಚನೆ ನೀಡಿದೆ. ಇದನ್ನು ಆಧರಿಸಿ ಎಲ್ಲಾ ಶಾಸಕರು ಒಂದೊಂದು ಲಕ್ಷ ರೂ. ದೇಣಿಗೆಯನ್ನು ಪಕ್ಷದ ನಿಧಿಗೆ ನೀಡಿದ್ದಾರೆ.ಹೀಗಾಗಿಮುಖ್ಯಮಂತ್ರಿ ಪರಿಹಾರ ನಿಧಿಗೆ ಸೇರಬೇಕಾಗಿದ್ದ ಈ ಹಣ ಪಕ್ಷದ ಕಚೇರಿಗೆ ಸಲ್ಲಿಕೆಯಾಗಿದೆ. ಮತ್ತೊಂದೆಡೆ ಜೆಡಿಎಸ್ ಪಾಳಯದಿಂದ ಕೆಲವು ಶಾಸಕರು ವೈಯಕ್ತಿಕವಾಗಿ ದೇಣಿಗೆ ನೀಡಿದ್ದಾರೆಯೇ ಹೊರತು ಸಾಮೂಹಿಕವಾಗಿ ಈ ಕುರಿತು ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ವಿಪಕ್ಷಗಳನ್ನು ಕಡೆಗಣಿಸಿದ್ದೇ ಮುಳುವಾಯ್ತಾ..?
ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಬಿಜೆಪಿ ಸರ್ಕಾರ ತಾನೇ ಎಲ್ಲವನ್ನು ಸರಿಪಡಿಸುವ ಹುಮ್ಮನಸ್ಸಿನಲ್ಲಿಯೇ ಹೆಜ್ಜೆ ಹಾಕಿತ್ತು. ವಿರೋಧ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಧಾನಸಭೆ ನಡೆಯುತ್ತಿದ್ದರೂ ಸರ್ಕಾರ ಕೊರೊನಾ ವಿಷಯದಲ್ಲಿ ವಿಪಕ್ಷದ ನೆರವು ಯಾಚಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಕಾಂಗ್ರೆಸ್ ತನ್ನದೇ ದಾರಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ ವಿಪಕ್ಷಗಳು ನೀಡಿದ ದೇಣಿಗೆಯಲ್ಲಿ ಆಡಳಿತ ಪಕ್ಷದ ಕೆಲವರು ತಮ್ಮ ಪ್ರಚಾರ ಮಾಡಿಕೊಳ್ಳುತ್ತಿದ್ದರು ಎಂದು ಕೂಡ ವಿಪಕ್ಷಗಳು ಆರೋಪಿಸಿವೆ. ಹೀಗಾಗಿ
ಪಕ್ಷವೇ ದೇಣಿಗೆ ಸಂಗ್ರಹಿಸಿ ಅದರಲ್ಲಿ ರಚನಾತ್ಮಕವಾಗಿ ಕೆಲಸ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ.
ಇನ್ನು ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ನಿಯೋಗ, ಕೊರೊನಾ ಟಾಸ್ಕ್ ಫೋರ್ಸ್ ವರದಿ ಸಲ್ಲಿಕೆ ಮಾಡಲಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಆಹಾರ ಕಿಟ್ ನೀಡುವ ವಿಚಾರದಲ್ಲಿ ತಾರತಮ್ಯದ ಬಗ್ಗೆಯೂ ಸಿಎಂ ಗಮನಕ್ಕೆ ನಿಯೋಗ ತಂದಿದೆ ಎನ್ನಲಾಗಿದೆ.








