ಯೂರೋ ಕಪ್ 2021- ಬೆಲ್ಜಿಯಂಗೆ ತಲೆಬಾಗಿದ ಡೆನ್ಮಾರ್ಕ್, ನೆದರ್ಲೆಂಡ್, ಉಕ್ರೇನ್ ಗೆ ಸುಲಭ ಜಯ
ಯೂರೋಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಬೆಲ್ಜಿಯಂ ಎರಡನೇ ಗೆಲುವು ದಾಖಲಿಸಿದೆ. ಈ ಮೂಲಕ ಬಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜೊತೆಗೆ ಪ್ರಿ ಕ್ವಾರ್ಟರ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಬಿ ಗುಂಪಿನ ಲೀಗ್ ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ತಂಡ 2-1 ಗೊಲುಗಳಿಂದ ಡೆನ್ಮಾರ್ಕ್ ತಂಡವನ್ನು ಮಣಿಸಿತು. ಡೆನ್ಮಾರ್ಕ್ ಆಡಿರುವ ಎರಡು ಪಂದ್ಯಗಳಲ್ಲಿ ಸೋತು ಬಿ ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಹಾಗೇ ನೋಡಿದ್ರೆ ಬೆಲ್ಜಿಯಂ ತಂಡಕ್ಕೆ ಡೆನ್ಮಾರ್ಕ್ ಎರಡನೇ ನಿಮಿಷದಲ್ಲಿ ಆಘಾತ ನೀಡಿತ್ತು. ಡೆನ್ಮಾರ್ಕ್ ನ ಯೂಸೂಫ್ ಪೌಲ್ಸೆನ್ ಅವರು ಮಿಂಚಿನ ಗೋಲು ದಾಖಲಿಸಿ ತಂಡಕ್ಕೆ ಆರಂಭ ಮುನ್ನಡೆ ಒದಗಿಸಿದ್ರು. ಅಲ್ಲದೆ ಮೊದಲಾರ್ಧದಲ್ಲಿ ಇದೇ ಮುನ್ನಡೆಯನ್ನು ಪಡೆದುಕೊಳ್ಳಲು ಡೆನ್ಮಾರ್ಕ್ ಸಫಲವಾಯ್ತು.
ಆದ್ರೆ ದ್ವಿತೀಯಾರ್ಧದಲ್ಲಿ ಬೆಲ್ಜಿಯಂ ಬಿರುಸಿನ ಆಟವನ್ನಾಡಿತ್ತು. ಪರಿಣಾಮ ಪಂದ್ಯದ 54ನೇ ನಿಮಿಷದಲ್ಲಿ ಟೊರ್ಗಾನ್ ಹಝಾರ್ಡ್ ಗೋಲು ದಾಖಲಿಸಿ ಅಂತರವನ್ನು ಸಮಗೊಳಿಸಿದ್ರು. ಬಳಿಕ ಪಂದ್ಯದ 70ನೇ ನಿಮಿಷದಲ್ಲಿ ಕೆವಿನ್ ಡೆ ಬ್ರೂಯ್ನ್ ಅವರು ಎರಡನೇ ಗೋಲು ದಾಖಲಿಸಿ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದ್ರು.
ಸಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಉಕ್ರೇನ್ ತಂಡ 2-1 ಗೋಲುಗಳಿಂದ ನಾರ್ತ್ ಮೆಕ್ ಡೋನಿಯಾ ತಂಡವನ್ನು ಮಣಿಸಿತು. ಇದ್ರೊಂದಿಗೆ ಉಕ್ರೇನ್ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಲೀಗ್ ನ ಕೊನೆಯ ಪಂದ್ಯದಲ್ಲಿ ಉಕ್ರೇನ್ ತಂಡ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಇನ್ನು ಸಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ 2-0 ಗೋಲುಗಳಿಂದ ಆಸ್ಟ್ರೀಯಾ ತಂಡವನ್ನು ಸೋಲಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಪಕ್ಕಾ ಮಡಿಕೊಂಡಿದೆ. ಸಿ ಗುಂಪಿನ ಲೀಗ್ ಪಂದ್ಯಗಳಲ್ಲಿ ನೆದರ್ಲೆಂಡ್ ಆಡಿರುವ ಎರಡು ಪಂದ್ಯಗಳನ್ನು ಗೆದ್ದುಕೊಂಡು ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.








