ಅಪ್ರಾಪ್ತೆಗೆ ಟಿವಿ ನೋಡಲು ಅವಕಾಶ ಕೊಟ್ಟು , ನಿರಂತರ ಅತ್ಯಾಚಾರ – ಚಿಕ್ಕ ವಯಸ್ಸಿನಲ್ಲೇ ಗರ್ಭಿಣಿಯಾದ ಸಂತ್ರಸ್ತೆ
ಆಂಧ್ರಪ್ರದೇಶ : ಬಡ ಅಪ್ರಾಪ್ತೆಯೊಬ್ಬಳನ್ನ ಟಿವಿ ನೋಡಲು ಅವಕಾಶ ಕೊಡುವ ಆಮೀಷವೊಡ್ಡಿ ಮನೆಗೆ ಕರೆಯುತ್ತಿದ್ದ ಕಾಮುಕನೊಬ್ಬ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಹೇಯ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ಅಪ್ರಾಪ್ತೆಯು ಗರ್ಭಿಣಿಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಅನಿಲ್ (26) ಎಂಬಾತನನ್ನು ಬಂಧಿಸಲಾಗಿದೆ. ಈತ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ.
ಬಾಲಕಿ ಕುಟುಂಬ ತೀರಾ ಬಡತನದಲ್ಲಿದ್ದು, ಅವರ ಬಳಿ ಟಿವಿಯೂ ಇಲ್ಲ.. ಹೀಗಾಗಿ ಆ ಬಾಲಕಿ ಪಕ್ಕದ ಮನೆಗೆ ಹೋಗಿ ಬಿಡುವಿನ ಸಮಯದಲ್ಲಿ ಟಿವಿ ನೋಡುತ್ತಿದ್ದಳು. ಇದನ್ನು ಗಮನಿಸಿದ್ದ ಆರೋಪಿ, ನಮ್ಮ ಮನೆಗೆ ಬಂದರೆ ನಿನಗೆ ಇಷ್ಟವಾದ ಚಾನೆಲ್ ಮತ್ತು ಪ್ರೋಗ್ರಾಮ್ ನೋಡಬಹುದು ಎಂದು ಆಮಿಷವೊಡ್ಡಿದ್ದಾನೆ. ಆತನ ಮಾತನ್ನು ನಂಬಿದ ಬಾಲಕಿ ಅವನ ಮನೆಗೆ ಹೋಗಲು ಆರಂಭಿಸಿದ್ದಾಳೆ.
ಈ ವೇಳೆ ಆರೋಪಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆನಂತರ ಪೋಷಕರ ಬಳಿ ಅಸಲಿ ಸಂಗತಿಯನ್ನ ಬಾಲಕಿ ಹಂಚಿಕೊಂಡಿದ್ದು, ಸಂತ್ರಸ್ತೆಯ ಪೋಷಕರು ಈ ಸಂಬಂಧ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.








