ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಗೆಲುವಿಗೆ ಸಂತೋಷ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವಕ್ತಾರೆ ಶರ್ಮಿಸ್ತಾ ಮುಖರ್ಜಿ ಬುಧವಾರ ಪ್ರಶ್ನಿಸಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಎಎಪಿಯ ವಿಜಯವನ್ನು ಶ್ಲಾಘಿಸಿದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ‘ಎಎಪಿ ಗೆದ್ದಿದೆ, ದೆಹಲಿಯ ಎಲ್ಲಾ ಭಾಗದ ಜನರು ವಿಭಜಿಸುವ ಮತ್ತು ಅಪಾಯಕಾರಿ ಅಜೆಂಡಾವನ್ನು ಸೋಲಿಸಿದ್ದಾರೆ. 2021 ಮತ್ತು 2022 ರಲ್ಲಿ ಚುನಾವಣೆಗಳನ್ನು ನಡೆಸುವ ಇತರ ರಾಜ್ಯಗಳಿಗೆ ಮಾದರಿಯಾದ ದೆಹಲಿ ಜನರಿಗೆ ನಾನು ವಂದಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದರು.

ಚಿದಂಬರಂ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮುಖರ್ಜಿ ಸರ್ ಗೌರವದೊಂದಿಗೆ ನಿಮ್ಮಿಂದ ಒಂದು ವಿಷಯವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ಸೋಲಿಸುವ ಕಾರ್ಯವನ್ನು
ಪ್ರಾದೇಶಿಕ ಪಕ್ಷಗಳಿಗೆ ಹೊರಗುತ್ತಿಗೆ ನೀಡಿದೆಯೇ? ಇಲ್ಲದಿದ್ದರೆ ನಮ್ಮ ಸೋಲಿನ ಬಗ್ಗೆ ಯೋಚಿಸುವುದನ್ನು ಬಿಟ್ಟು ಎಎಪಿ ಪಕ್ಷದ ವಿಜಯಕ್ಕೆ ಏಕೆ ಸಂತೋಷ ಪಡಬೇಕು. ಹೌದಾದರೆ ನಾವು ಅಂಗಡಿಯನ್ನು ಮುಚ್ಚುತ್ತೇವೆ ಎಂದು ಬರೆದಿದ್ದಾರೆ.








