ಮುಂದಿನ ಸಿಎಂ ಚರ್ಚೆ | ಚೆಂಡು ಹೈಕಮಾಂಡ್ ಅಂಗಳದಲ್ಲಿದೆ ಎಂದ ಹುಲಿಯಾ
ಕೊಪ್ಪಳ : ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದರೇ ಇತ್ತ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಕುಸ್ತಿ ಶುರುವಾಗಿದೆ.
ಕಾಂಗ್ರೆಸ್ ಶಾಸಕರು ಮುಂದಿನ ಸಿಎಂ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಪಕ್ಷದಲ್ಲಿ ಗೊಂದಲಮಯ ವಾತಾವರಣ ಸೃಷ್ಠಿಯಾಗಲು ಕಾರಣವಾಗಿದೆ.
ಇದೀಗ ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪುರ ಬಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಸಿಎ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆಯಾಗುತ್ತಿಲ್ಲ.
ಒಂದಿಷ್ಟು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಹೊರತು ಪಕ್ಷದ ಅಭಿಪ್ರಾಯವಲ್ಲ.
ಕಾಂಗ್ರೆಸ್ ನಲ್ಲಿ ಒಂದು ಸಿಸ್ಟಮ್ ಇದೆ. ಚುನಾವಣೆ ಮುಗಿದ ಬಳಿಕ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ.
ಯಾರೋ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ ತಕ್ಷಣ ಅದು ಪಕ್ಷದ ಅಭಿಪ್ರಾಯವಲ್ಲ. ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.
ಇದೇ ವೇಳೆ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪ ಸಂಬಂಧ ಮಾತನಾಡಿ, ಈ ಪ್ರಕರಣದ ಕುರಿತು ತನಿಖೆಯಾಗಬೇಕು.
ತನಿಖೆಗೆ ನಾನು ಒತ್ತಾಯ ಮಾಡಿದ್ದೇನೆ. ಇನ್ನೊಬ್ಬರ ಫೋನ್ ಕದ್ದಾಲಿಕೆ ಮಾಡುವ ಅಧಿಕಾರ ಸರ್ಕಾರಕ್ಕಾಗಲಿ, ಪೊಲೀಸರಿಗಾಗಲಿ ಇಲ್ಲ ಎಂದು ತನಿಖೆಗೆ ಒತ್ತಾಯಿಸಿದರು.









