ಟೀಮ್ ಇಂಡಿಯಾ ಸೋತ್ರೂ ಫೈನಲ್ ಪಂದ್ಯದಲ್ಲಿ ಮೂರು ದಾಖಲೆ ಬರೆದ ವಿರಾಟ್ ಕೊಹ್ಲಿ..!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಟೀಮ್ ಇಂಡಿಯಾ ಸೋತಿರಬಹುದು. ನಾಯಕನಾಗಿ ಪ್ರಶಸ್ತಿ ಗೆಲ್ಲಲು ವಿರಾಟ್ ಕೊಹ್ಲಿ ವಿಫಲನಾಗಿರಬಹುದು.. ಬ್ಯಾಟ್ಸ್ ಮೆನ್ ಆಗಿ ಕೊಹ್ಲಿ ಎರಡೂ ಇನಿಂಗ್ಸ್ ಗಳಲ್ಲಿ ಒಟ್ಟು 57 ರನ್ ಗಳಿಸಿರಬಹುದು.. ಸೋಲಿಗೆ ನಾನಾ ಕಾರಣಗಳನ್ನು ಹೇಳಿರಬಹುದು.. ಹನ್ನೊಂದರ ಬಳಗವನ್ನು ಸಮರ್ಥನೆ ಮಾಡಿಕೊಂಡಿರಬಹುದು.. ವಿರಾಟ್ ಕೊಹ್ಲಿಯ ನಾಯಕತ್ವವನ್ನು ಕೂಡ ಪ್ರಶ್ನೆ ಮಾಡಬಹುದು.. ಅದೇನೇ ಇರಲಿ.. ಸೋಲು ಗೆಲುವು ಆಟದಲ್ಲೇ ಇದ್ದದ್ದೇ.
ಆದ್ರೂ ವಿರಾಟ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಮೂರು ದಾಖಲೆಗಳನ್ನು ನಿರ್ಮಿಸಿದ್ದಾರೆ. ತಂಡದ ನಾಯಕನಾಗಿ ಮಹತ್ವದ ಪ್ರಶಸ್ತಿ ಗೆಲ್ಲಲು ವಿಫಲರಾದ ವಿರಾಟ್ ಕೊಹ್ಲಿ ಕಪ್ತಾನನಾಗಿ, ಬ್ಯಾಟ್ಸ್‍ಮೆನ್ ಆಗಿ ವೈಯಕ್ತಿಕವಾಗಿ ಮೂರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಮೂರು ಮಾದರಿಯ ಐಸಿಸಿ ಟೂರ್ನಿಯ ಫೈನಲ್ ನಲ್ಲಿ ಆಡಿದ ಏಕೈಕ ಆಟಗಾರ
ಹೌದು, ಐಸಿಸಿ ಟೂರ್ನಿಯ ಮೂರು ಮಾದರಿಯ ಕ್ರಿಕೆಟ್ ಪಂದ್ಯದ ಫೈನಲ್ ನಲ್ಲಿ ಆಡಿದ ವಿಶ್ವದ ಮೊದಲ ಆಟಗಾರ ಎಂಬ ಗೌರವಕ್ಕೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
2008ರ 19 ವಯೋಮಿತಿ ವಿಶ್ವಕಪ್ ಕ್ರಿಕೆಟ್, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ, 2014ರ ಟಿ-ಟ್ವೆಂಟಿ ವಿಶ್ವಕಪ್ ಹಾಗೂ 2021ರ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್ ನಲ್ಲಿ ವಿರಾಟ್ ಕೊಹ್ಲಿ ಆಡಿದ್ದಾರೆ. ಇದ್ರಲ್ಲಿ, 19 ವಯೋಮಿತಿ ವಿಶ್ವಕಪ್, 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದ ತಂಡದಲ್ಲಿದ್ದರು. ನಾಯಕನಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ 7500 ರನ್ ದಾಖಲಿಸಿದ್ದ ಭಾರತದ ಆರನೇ ಆಟಗಾರ..!
ಇನ್ನು ವಿರಾಟ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 7500 ರನ್ ಗಳಿಸಿದ್ದ ಭಾರತದ ಆರನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ್ದ ವಿಶ್ವದ 42ನೇ ಬ್ಯಾಟ್ಸ್ ಮೆನ್ ಕೂಡ ಹೌದು. ಇನ್ನು ಒಂದು ವಿಶೇಷ ಅಂದ್ರೆ ಸುನೀಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ 154 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಸದ್ಯ 92 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಟೀಮ್ ಇಂಡಿಯಾದ ನಾಯಕನಾಗಿ ಅತೀ ಹೆಚ್ಚು ಪಂದ್ಯವನ್ನಾಡಿದ್ದ ಹಿರಿಮೆ ಈಗ ವಿರಾಟ್ ಕೊಹ್ಲಿಯವರದ್ದು..!
ಇನ್ನು ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಅತೀ ಹೆಚ್ಚು ಪಂದ್ಯವನ್ನಾಡಿದ್ದ ಗೌರವಕ್ಕೂ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಇಲ್ಲಿಯವರೆಗೆ 61 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ಸಾಧನೆ ಮಾಡುವ ಮೂಲಕ ಧೋನಿಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಹಾಗೇ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ 15 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, ಎರಡು ಶತಕ ಹಾಗೂ ಐದು ಅರ್ಧಶತಕಗಳ ಸಹಾಯದಿಂದ ಒಟ್ಟು 934 ರನ್ ಗಳಿಸಿದ್ದಾರೆ.








