ನಾನು ಸಿಎಂ ರೇಸ್ ನಲ್ಲಿಲ್ಲ ಎಂದು ಸಿದ್ದರಾಮಯ್ಯ Siddaramaiah ಘೋಷಿಸಲಿ : ಈಶ್ವರಪ್ಪ ಸವಾಲ್
ಶಿವಮೊಗ್ಗ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾನು ಮುಂದಿನ ಸಿಎಂ ರೇಸ್ ನಲ್ಲಿ ಇಲ್ಲ. ಶಾಸಕರು ಹೀಗೆ ಮಾತನಾಡಬೇಡಿ. ಮಾತನಾಡಿದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಕಠಿಣ ನಿಲುವು ತೆಗೆದುಕೊಳ್ಳಲಿ ನೋಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಕೆ.ಎಸ್.ಈಶ್ವರಪ್ಪ ಸವಾಲ್ ಎಸೆದಿದ್ದಾರೆ.
ಕಾಂಗ್ರೆಸ್ ಸಿಎಂ ಕಿತ್ತಾಟದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದೆ. ಇನ್ನು ಎರಡು ವರ್ಷಗಳ ಕಾಲ ಅಧಿಕಾರ ಇದೆ. ಈ ನಡುವೆ ಡಿಕೆಶಿ ಮತ್ತು ಸಿದ್ದರಾಮಯ್ಯನವರು ಸಿಎಂ ಕುರ್ಚಿಗೆ ಬಿಗ್ ಫೈಟ್ ನಡೆಸುತ್ತಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್ ನವರು ಕತ್ತಲ ಕೋಣೆಯಲ್ಲಿ ಇಲ್ಲದ ಕರಿ ಬೆಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಅನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ ಮುಖ್ಯಮಂತ್ರಿ ಖುರ್ಚಿ ಕನಸು ಕಾಣುವ ಮೊದಲು ಸಿದ್ದರಾಮಯ್ಯ ಸೇರಿ ಎಲ್ಲರೂ ಗೆದ್ದು ಬರಬೇಕು. ಅವರ ಪಕ್ಷಕ್ಕೆ ಬಹುಮತ ಬರಬೇಕು. ಅವರ ಶಾಸಕರು ಒಪ್ಪಿಗೆ ಕೊಡಬೇಕು. ನಂತರ ಕೇಂದ್ರದ ನಾಯಕರು ತೀರ್ಮಾನ ಮಾಡಬೇಕು. ಕಾಂಗ್ರೆಸ್ ಶಾಸಕರಾದ ಜಮೀರ್, ರಾಮಪ್ಪ, ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ ತಕ್ಷಣ ಸಿಎಂ ಆಗುವುದಕ್ಕೆ ಏನು ಮುಖ್ಯಮಂತ್ರಿ ಸ್ಥಾನ ಅವರ ಜೇಬಿನಲ್ಲಿ ಇದೆಯಾ ಎಂದು ಲೇವಡಿ ಮಾಡಿದರು.








