ಜೆಡಿಎಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು..? ರೇವಣ್ಣ ಹೇಳಿದ್ದೇನು..?
ಹಾಸನ : ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ.. ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿಯಾರು ಎಂಬ ಗೊಂದಲ.. ಎರಡೂ ರಾಷ್ಟ್ರೀಯ ಪಕ್ಷಗಳು ಸದ್ಯದ ಕೊರೊನಾ ಪರಿಸ್ಥಿತಿಯನ್ನ ಮರೆತು ತಮ್ಮದೇಯಾದ ಗುದ್ದಾಟದಲ್ಲಿವೆ. ಬಿಜೆಪಿಯಲ್ಲಿ ಎದ್ದಿರುವ ಬಿರುಗಾಳಿಯನ್ನ ತಡೆಯಲು ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ. ಇತ್ತ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರೇ ದೆಹಲಿಗೆ ದೌಡಾಯಿಸಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಆದರೂ ಕೂಡ ಎರಡು ಪಕ್ಷಗಳಲ್ಲಿ ಉದ್ಭವವಾಗಿರುವ ಈ ಚರ್ಚೆ ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ ಜೆಡಿಎಸ್ ನ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮುಂದಿನ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ. ನಮ್ಮಲ್ಲಿ ಯಾವುದೇ ಜಗಳ ಇಲ್ಲ , 2023 ರ ನಂತರ ನೋಡಿ ಎಂದಿದ್ದಾರೆ.
ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ರೇವಣ್ಣ, ನಮ್ಮ ಪಕ್ಷದಲ್ಲಿ ಯಾವುದೆ ಟಾಕ್ ಇಲ್ಲ. ಕುಮಾರಸ್ವಾಮಿ ನಮ್ಮ ಮುಂದಿನ ಸಿಎಂ ಅಭ್ಯರ್ಥಿ . ರೈತರ ಸಾಲ ಮನ್ನಾ ಮಾಡಿದ್ದೆವೆ ಇದನ್ನು ನೆನೆದು ನಮಗೆ ಅಧಿಕಾರ ಕೊಡ್ರಪ್ಪ, ನಮ್ಮಲ್ಲಿ ಯಾವುದೇ ಜಗಳ ಇಲ್ಲ , 2023 ರ ನಂತರ ನೋಡಿ, ನಮ್ಮನ್ನು ಮನೆಗೆ ಕಳಿಸುತ್ತೇವೆ ಎಂದವರು 2023ರ ನಂತರ ನೋಡಿ ಎಂದು ಹೇಳಿದ್ದಾರೆ.









