ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಟಗರಿಗೆ ಟಕ್ಕರ್.. ಖರ್ಗೆಗೆ ಪಟ್ಟ.. ಡಿಕೆಶಿ ಮಾಸ್ಟರ್ ಪ್ಲಾನ್..?
ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು..? ಪಕ್ಷ ಅಧಿಕಾರಕ್ಕೆ ಬಂದ್ರೆ ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಚರ್ಚೆ ಬೆಂಕಿ ಬಿರುಗಾಳಿಯನ್ನ ಸೃಷ್ಠಿ ಮಾಡಿದೆ. ಸಿದ್ದರಾಮಯ್ಯ ಬೆಂಬಲಿಗರು ಹುಲಿಯಾನೇ ಮುಂದಿನ ಸಿಎಂ ಅಂತಾ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಬೆಂಬಲಿಗರು ಸಿದ್ದರಾಮಯ್ಯ ಅಂಡ್ ಟೀಂಗೆ ಟಾಂಗ್ ನೀಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ರೇಸ್ ನಲ್ಲಿರುವ ಹೆಸರುಗಳನ್ನು ನೋಡಿದ್ರೆ ಶೇ 50ರಷ್ಟು ನಾಯಕರು ಮುಖ್ಯಮಂತ್ರಿ ಆಕಾಂಕ್ಷಿಗಳೇ. ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ ಸಿಎಂ ಆಗಬೇಕೆಂಬ ಆಸೆ ಮಾತ್ರ ಕಾಂಗ್ರೆಸ್ ಸಾಕಷ್ಟು ಹಿರಿಯ ನಾಯಕರಲ್ಲಿದೆ.
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಯೊಂದು ಒಂದಿಷ್ಟು ಕುತೂಹಲಕ್ಕೆ ಕೆರಳಿಸಿದೆ. ಅಲ್ಲದೆ ಕಾಂಗ್ರೆಸ್ ಕಟ್ಟಪ್ಪನ ಆ ಹೇಳಿಕೆಯಲ್ಲಿ ಸಿದ್ದುಗೆ ಖೆಡ್ಡಾ ತೋಡುವ ತಂತ್ರವಿದ್ಯಾ..? ಅನ್ನೋ ಪ್ರಶ್ನೆ ಕೂಡ ತಲೆಯಲ್ಲಿ ಗಿರಕಿ ಹೊಡೆಯುತ್ತಿದೆ.
ಡಿಕೆಶಿವಕುಮಾರ್ ಹೇಳಿದ್ದಿಷ್ಟು..!
ಮುಂದಿನ ಸಿಎಂ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನ ಶಾಸಕರು, ಹೈಕಮಾಂಡ್ ನಿರ್ಧಾರ ಮಾಡುತ್ತೆ. ರಾಜ್ಯದಲ್ಲಿ ಚುನಾವಣೆಯಲ್ಲಿ ನಿಂತು ಗೆಲ್ಲದೇ ಇದ್ದರೂ ಸಿಎಂ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇದರಲ್ಲಿ ಚುನಾವಣೆಗೆ ನಿಲ್ಲದೇ ಇದ್ದರೂ ಸಿಎಂ ಆಗಿದ್ದಾರೆ ಅನ್ನೋ ಹೇಳಿಕೆ ಇದೀಗ ತೀವ್ರ ಕುತೂಹಲ ಕೆರಳಿಸಿದೆ. ಟ್ರಬಲ್ ಶೂಟರ್ ರ ಈ ಹೇಳಿಕೆ, ರಾಜ್ಯ ಕಾಂಗ್ರೆಸ್ ನಲ್ಲಿ ಹೈಕಮಾಂಡ್ ವರೆಗೂ ತಮ್ಮದೇಯಾದ ಹಿಡಿತ ಮತ್ತು ಒಂದು ಸಮುದಾಯದ ಬೆಂಬಲವಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸುತ್ತಾ ಅನ್ನೋ ಪ್ರಶ್ನೆಗೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಹೊಡೆದು ನೋಡಿದ್ರೆ ಸದ್ಯ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸುವ ಯಾವುದೇ ಸಾಧ್ಯತೆಗಳಿಲ್ಲ. ಅವರು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಒಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೇ ಆಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಸಹಜವಾಗಿಯೇ ಸೃಷ್ಠಿಯಾಗುತ್ತದೆ. ಸದ್ಯದ ಟ್ರೆಂಡ್ ನೋಡಿದ್ರೆ ಸಾಕಷ್ಟು ಶಾಸಕರು ಸಿದ್ದರಾಮಯ್ಯಗೆ ಜೈ ಎನ್ನುವ ಸಾಧ್ಯತೆಗಳಿವೆ. ಹೀಗಾಗಿ ಒಂದು ವೇಳೆ ಸಿಎಂ ರೇಸ್ ನಿಂದ ಡಿಕೆಶಿ ಹಿಂದೆ ಸರಿದು ಖರ್ಗೆ ಅವರ ಹೆಸರನ್ನು ಮುಂದೆ ತಳ್ಳಿದರೇ ಆಗ ಶಾಸಕರ ಅಭಿಪ್ರಾಯ ಬದಲಾಗುವ ಸಾಧ್ಯತೆಗಳಿವೆ. ಮುಖ್ಯವಾಗಿ ಮೂಲ ಕಾಂಗ್ರೆಸ್ಸಿಗರು ಖರ್ಗೆ ಪರ ನಿಲ್ಲೋದ್ರಲ್ಲಿ ಡೌಟೇ ಇಲ್ಲ. ಇದಲ್ಲದೇ ಖರ್ಗೆ ವಿಚಾರವಾಗಿ ಸಾಕಷ್ಟು ಕಾಂಗ್ರೆಸ್ ನಾಯಕರಲ್ಲಿ ಒಂದು ರೀತಿಯ ಧನಾತ್ಮಕತೆಯಿಂದ ಕೂಡಿದ ಸಾಫ್ಟ್ ಕಾರ್ನರ್ ಇದೆ. ಇದಕ್ಕೆ ಕಾರಣ ಮಲ್ಲಿಕಾರ್ಜುನ್ ಖರ್ಗೆ ರಾಜ್ಯ ಕಾಂಗ್ರೆಸ್ ನ ಪ್ರಭಾವಿ ನಾಯಕರು, ಪಕ್ಷಕ್ಕೆ ತಮ್ಮದೇಯಾದ ಸೇವೆ ಸಲ್ಲಿಸಿದ್ದಾರೆ. ಅವರ ಜೊತೆಯಲ್ಲಿದ್ದ ಎಲ್ಲಾ ರಾಜಕಾರಣಿಗಳು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಆದ್ರೆ ಖರ್ಗೆ ಮಾತ್ರ ಪಕ್ಷದ ಮಾತಿಗೆ ಕಟ್ಟುಬಿದ್ದು ಮುಖ್ಯಮಂತ್ರಿ ಸ್ಥಾನಕ್ಕೇರಿಲ್ಲ. ಅಲ್ಲದೇ ಹೈಕಮಾಂಡ್ ಕೂಡ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರನ್ನ ಸುಲಭವಾಗಿ ತೆಗೆದು ಹಾಕುವುದಿಲ್ಲ. ಈ ಕಾರಣಕ್ಕೆ ಡಿಕೆಶಿವಕುಮಾರ್ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರನ್ನ ಸೂಚಿಸುವ ಸಾಧ್ಯತೆಗಳು ದಟ್ಟವಾಗಿವೆ.
ಖರ್ಗೆ ಸಿಎಂ ಆದ್ರೆ ಡಿಕೆಶಿಗೇನು ಲಾಭ..?
ರಾಜಕಾರಣದಲ್ಲಿ ರಾಜಕಾರಣಿಗಳು ಏನೇ ಮಾಡಿದ್ರೂ ಅದರಲ್ಲಿ ಒಂದಿಷ್ಟು ಸ್ವಾರ್ಥ ಇದ್ದೇ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದೇ ರೀತಿ ಒಂದು ವೇಳೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಡಿ.ಕೆ.ಶಿವಕುಮಾರ್ ಸಿಎಂ ಮಾಡುವಲ್ಲಿ ಯಶಸ್ವಿಯಾದರೇ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆದಂತಾಗುತ್ತದೆ.
ಹೌದು..! ಸದ್ಯದ ಮಟ್ಟಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಗೆ ಪ್ರಬಲ ಎದುರಾಳಿ ಅಂದ್ರೆ ಅದು ಹುಲಿಯಾ ಸಿದ್ದರಾಮಯ್ಯ..!! ಸಿದ್ದರಾಮಯ್ಯವರ ವರ್ಚಸ್ಸಿಗೆ ಹೋಲಿಕೆ ಮಾಡಿದ್ರೆ ಡಿಕೆಶಿವಕುಮಾರ್ ಇನ್ನೂ ಆ ಮಟ್ಟಿಗೆ ಬೆಳೆದಿಲ್ಲ. ಸಿದ್ದರಾಮಯ್ಯರಂತೆ ಕನಕಪುರ ಬಂಡೆ ಮಾಸ್ ಲೀಡರ್ ಎನಿಸಿಕೊಳ್ಳಲು ಇನ್ನೂ ಒಂದಿಷ್ಟು ವರ್ಷಗಳು ಬೇಕಿದೆ. ಇದು ಡಿ.ಕೆ.ಶಿವಕುಮಾರ್ ಅವರಿಗೂ ಕೂಡ ಚೆನ್ನಾಗಿ ಗೊತ್ತಿದೆ.
ಈ ಕಾರಣಕ್ಕಾಗಿ ವಜ್ರವನ್ನ ವಜ್ರದಿಂದಲೇ ಕತ್ತರಿಸಬೇಕೆಂಬಂತೆ ಸಿಎಂ ರೇಸ್ ನಲ್ಲಿ ಸಿದ್ದರಾಮಯ್ಯ ಮುಂದೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನಿಲ್ಲಿಸಿದ್ರೆ ಸಿದ್ದರಾಮಯ್ಯಗೆ ಬ್ರೇಕ್ ಹಾಕಿದಂತಾಗುತ್ತದೆ. ಈಗಾಗಲೇ ಒಂದು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆಗೆ ದಾರಿ ಮಾಡಿಕೊಡುವ ಸಾಧ್ಯತೆಗಳು ಕೂಡ ಇವೆ. ಹಿರಿಯತನದ ಆಧಾರದ ಮೇಲೆ ಖರ್ಗೆ ಸಿಎಂ ಆಗಲು ಸಿದ್ದರಾಮಯ್ಯ ಒಪ್ಪಲೇ ಬೇಕಾಗುತ್ತದೆ.
ದಲಿತ ಮತಗಳ ಮೇಲೆ ಡಿಕೆಶಿ ಕಣ್ಣು..!
ಖರ್ಗೆ ಸಿಎಂ ಆದ್ರೆ ಡಿಕೆಶಿಗೆ ಆಗುವ ಲಾಭಗಳಲ್ಲಿ ಇದು ಅತ್ಯಂತ ಮುಖ್ಯವಾದದ್ದು. ಒಂದು ವೇಳೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಮಾಡಿದ್ದೇ ಆದ್ದಲ್ಲಿ, ದಲಿತರು ಡಿ.ಕೆ.ಶಿವಕುಮಾರ್ ಬೆನ್ನಿಗೆ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ದಲಿತ ಮುಖ್ಯಮಂತ್ರಿ ಕೂಗು ರಾಜ್ಯದಲ್ಲಿ ಸಾಕಷ್ಟು ವರ್ಷಗಳಿಂದ ಕೇಳಿಬರುತ್ತಿದೆ. ದಲಿತರು ಕೂಡ ಸಿಎಂ ವಿಚಾರದಲ್ಲಿ ತಮ್ಮ ನಾಯಕರಿಗೆ ಮೋಸ ಆಗುತ್ತಿದೆ ಎಂಬ ಭಾವನೆಯಲ್ಲಿದ್ದಾರೆ. ಹೀಗಾಗಿ ಖರ್ಗೆ ಸಿಎಂ ಆದ್ರೆ ಆ ಕ್ರೆಡಿಟ್ ಡಿಕೆಶಿವಕುಮಾರ್ ಗೆ ಹೋಗುತ್ತದೆ. ಇದರಿಂದ ಒಕ್ಕಲಿಗ ಸಮುದಾಯದ ಜೊತೆ ಜೊತೆಗೆ ದಲಿತ ಸಮುದಾಯ ಕೂಡ ಕನಕಪುರ ಬಂಡೆ ಬೆನ್ನಿಗೆ ನಿಲ್ಲುವ ಸಾಧ್ಯತೆಗಳಿವೆ. ಆಗ ಡಿಕೆಶಿವಕುಮಾರ್ ಅಂದುಕೊಂಡಂತೆ ಮಾಸ್ ಲೀಡರ್ ಇಮೇಜ್ ಸಂಪಾದನೆ ಮಾಡಬಹುದು. ಜೊತೆಗೆ ಮುಂದೆ ತಮ್ಮ ರಾಜಕೀಯ ಭವಿಷ್ಯಕ್ಕೆ ಇದು ಆನೆಬಲ ತರುವುದರಲ್ಲಿ ಯಾವುದೇ ಸಂಶಯವಿಲ್ಲ.











