ನವದೆಹಲಿ : ಮಾರಕ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ ಡೌನ್ ಮುಂದುವರೆಸಲಾಗಿದೆ. ಜನರ ಒಳಿತಿಗಾಗಿ ಕೊರೊನಾ ವಾರಿಯರ್ಸ್ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಆದರೆ, ಹಲವೆಡೆ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಕಿಡಿಗೇಡಿಗಳು ಪುಂಡಾಟ ನಡೆಸುತ್ತಿರುವ ಘಟನೆ ಮರುಕಳಿಸುತ್ತಲೇ ಇದೆ. ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಕೊರೊನಾ ವಾರಿಯರ್ಸ್ ರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನೊಂದನ್ನು ಜಾರಿಗೊಳಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ದೇಕರ್, ‘ಆರೋಗ್ಯ ಕಾರ್ಯಕರ್ತರು ಮತ್ತು ಇತರ ಕರೋನಾ ಯೋಧರನ್ನು ಉಳಿಸಲು’ ಈ ಸುಗ್ರೀವಾಜ್ಞೆಯನ್ನು ತರಲಾಗಿದೆ ಎಂದಿದ್ದಾರೆ. ಹೊಸ ಕಾನೂನಿನ ಪ್ರಕಾರ, ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿ ಜಾಮೀನು ರಹಿತ ಅಪರಾಧವಾಗಿದೆ. ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು, ಅವರತ್ತ ಉಗುಳುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಜಾಮೀನು ರಹಿತ ಅಪರಾಧ. ಅಂಥವರಿಗೆ 6ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಘೋಷಿಸಿದ್ದಾರೆ.
ಇನ್ನು 120 ವರ್ಷಗಳ ಹಿಂದಿನ ಸಾಂಕ್ರಾಮಿಕ ಕಾಯಿಲೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಅದರ ಅನ್ವಯ ವೈದ್ಯರು, ನರ್ಸ್ ಗಳು, ಆರೋಗ್ಯ ಕಾರ್ಯಕರ್ತರು, ಆಶಾಕಾರ್ಯಕರ್ತರ ಮೇಲೆ ಯಾರೇ, ಎಲ್ಲೇ ಹಲ್ಲೆ ನಡೆಸಿದರೂ ಅವರಿಗೆ 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂ.ವರೆಗೆ ದಂಡವನ್ನೂ ವಿಧಿಸಬಹುದು. ಏಳು ವರ್ಷಗಳವರೆಗೆ ಜೈಲು ಶಿಕ್ಷೆಗೂ ಗುರಿಯಾಗಿಸಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ








