ಬೆಂಗಳೂರು: ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಬಡವರಿಗೆ ನೀಡುವ ಅಕ್ಕಿಯನ್ನು ಬಳಸಿಕೊಂಡು ಸ್ಯಾನಿಟೈಸರ್ ತಯಾರಿಕೆ ಮಾಡುವುದು ಸರಿ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸ್ಯಾನಿಟೈಸರ್ ತಯಾರಿಕೆ ಮಾಡುವುದಕ್ಕೆ ಅದರದೇ ಆದ ಕಚ್ಚಾವಸ್ತುಗಳು ಇವೆ. ಅವುಗಳನ್ನು ಬಳಸಿಕೊಂಡು ಸ್ಯಾನಿಟೈಸರ್ ತಯಾರಿಕೆ ಮಾಡಲಿ. ಅದು ಬಿಟ್ಟು ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಕೆ ಸರಿ ಅಲ್ಲ. ಆ ಅಕ್ಕಿಯನ್ನು ಬಡವರಿಗೆ ಕೊಟ್ಟರೆ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಒಂದು ವೇಳೆ ಹಾಗೇನಾದರೂ ಅಕ್ಕಿ ಬಿಟ್ಟು ಬೇರೆ ವಸ್ತುಗಳಿಂದ ಸ್ಯಾನಿಟೈಸರ್ ತಯಾರಿಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಾದರೆ ಮಾತ್ರ ಅಕ್ಕಿಯಿಂದ ಮಾಡಲಿ ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಭಾರತೀಯ ಆಹಾರ ನಿಗಮ ಬಳಿ ಹೆಚ್ಚುವರಿಯಾಗಿ ಉಳಿದಿರುವ ಅಕ್ಕಿಯನ್ನು ಬಳಸಿಕೊಂಡು ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸಲು ನಿರ್ಧರಿಸಿದೆ.








