ಬೀದಿ ನಾಯಿಗಳಿಗೂ ಆಹಾರದ ಹಕ್ಕಿದೆ: ದೆಹಲಿ ಹೈಕೋರ್ಟ್
ಇತರರಿಗೆ ತೊಂದರೆ ಅಥವಾ ಕಿರುಕುಳವಾಗದ ರೀತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಹಕ್ಕು ನಾಗರಿಕರಿಗೆ ಇದೆ. ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ಯಾರೂ ಕೂಡ ನಿರ್ಬಂಧಿಸಬಾರದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಹೌದು ಪ್ರಾಣಿಗಳಿಗೆ ಕಾನೂನಿನ ಅಡಿಯಲ್ಲಿ ಜೀವಿಸುವ, ಆಹಾರ ಪಡೆಯುವ ಹಕ್ಕಿದೆ. ಪ್ರಾಣಿಗಳ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವುದು, ಅವುಗಳ ರಕ್ಷಣೆ ಮಾಡುವುದು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ನಾಗರಿಕರ ನೈತಿಕ ಬಾಧ್ಯತೆಗಳಾಗಿವೆ. ಬೀದಿ ನಾಯಿಗಳಷ್ಟೇ ಅಲ್ಲ, ಎಲ್ಲ ಜೀವಿಗಳ ಬಗ್ಗೆಯೂ ಮನುಷ್ಯರಾದವರು ಸಹಾನುಭೂತಿ ತೋರಿಸಬೇಕು ಎಂದು ನ್ಯಾಯಪೀಠ ಹೇಳಿದೆ..
ಡಾ. ಮಾಯಾ ಡಿ. ಚಬ್ಲಾನಿ ಅವರ ಮನವಿ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು, ಪ್ರಾಣಿಗಳಿಗೆ ಕ್ರೌರ್ಯ ತೋರಿಸುವುದು ಕಾನೂನಿಗೆ ವಿರುದ್ಧವಾದುದು. ಈ ವಿಚಾರದಲ್ಲಿ ಉತ್ತಮ ಸ್ಥರದಲ್ಲಿರುವ ನಾಗರಿಕರು ಮತ್ತು ಸರ್ಕಾರಿ ಅಧಿಕಾರಿಗಳಲ್ಲೇ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬೀದಿ ನಾಯಿಗಳನ್ನು ಪಾಲನೆ ಮಾಡುವವರಿಗೆ ಅಥವಾ ಬೀದಿ ನಾಯಿಗಳಿಗೆ ಆಹಾರ ಹಾಕುವವರಿಗೆ ಯಾವುದೇ ತೊಂದರೆ ಇಲ್ಲ ಎನ್ನುವ ಭರವಸೆ ನೀಡುವುದು, ಪೊಲೀಸ್ ನೆರವು ಸೇರಿ ಸಂಬಂಧಿಸಿದ ಎಲ್ಲ ಇಲಾಖೆಗಳ ಸಹಕಾರ ಒದಗಿಸುವುದು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಸ್ ಅಥವಾ ಮಹಾನಗರ ಪಾಲಿಕೆ ಮತ್ತು ಎಲ್ಲ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ನ್ಯಾಯಾಲಯ ಹೇಳಿದೆ.








