ಪುತ್ತೂರು; ಪ್ರಧಾನಿ ನರೇಂದ್ರ ಮೋದಿ ಅವರು ಜನಸಂಘದ ಕಾಲದಿಂದಲೂ ಕಾರ್ಯಕರ್ತರಾಗಿ ಶಾಸಕರಾಗಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಪ್ರಧಾನಿ ಮೋದಿ ಅವರು ಪುತ್ತೂರು ಕೊಂಬೆಟ್ಟಿನ ವಸುಂಧರಾ ನಿವಾಸದಲ್ಲಿರುವ ರಾಮ್‌ಭಟ್ ಅವರ ಸ್ಥಿರ ದೂರವಾಣಿಗೆ ಕರೆ ಮಾಡಿ `ರಾಮ್‌ಭಟ್‌ಜಿ ನಮಸ್ಕಾರ್’.. ಹೇಗಿದ್ದೀರಿ ಎಂದು ಆರೋಗ್ಯ ವಿಚಾರಿಸಿದರು. ನಾನು ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಉತ್ತರ ನೀಡಿದೆ ಎಂದು ರಾಮಭಟ್ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಪ್ರಧಾನಿಗಳ ಜೊತೆ ಮಾತನಾಡಿದ ಸಂತಸವನ್ನು ಹಂಚಿಕೊಂಡ ರಾಮ್ ಭಟ್ ಅವರು, ದೇಶದ ಪ್ರಧಾನಿ ಕರೆ ಮಾಡಿರುವುದು ಅತ್ಯಂತ ಸಂತಸ ತಂದಿದೆ. 8 ನೇ ಕ್ಲಾಸಿನಿಂದ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಲಾರಂಭಿಸಿದ ನಿಷ್ಟಾವಂತ ಕಾರ್ಯಕರ್ತರನ್ನು ಮಾತನಾಡಿಸುವ ಮೋದಿ ಅವರದ್ದು ಕಾರ್ಯಕರ್ತರನ್ನು ಬೆಳೆಸುವ ಲಕ್ಷಣ ಇದಾಗಿದೆ. ಅವರು ನನ್ನನ್ನು ನೆನಪಿಸಿಕೊಂಡು, ಗುರುತಿಸಿ ಮಾತನಾಡಿರುವುದು ದೊಡ್ಡ ಬಹುಮಾನ ಸಿಕ್ಕಿದಂತಾಗಿದೆ. ಪ್ರಧಾನಿ ನನ್ನನ್ನು ನೆನಪಿಸಿಕೊಂಡಿರುವುದು ನಿಜವಾದ ಸನ್ಮಾನ ನೀಡಿದಂತಾಗಿದೆ ಎಂದು ರಾಮ್ ಭಟ್ ತಿಳಿಸಿದರು. ನನಗೆ ಕೆಲವು ವಿಷಯ ಮಾತನಾಡೋಣ ಅನ್ನಿಸಿತು. ನಮ್ಮ ಬಹುಕಾಲದ ಕನಸು ಈ ದೇಶಕ್ಕೆ ಬಿಜೆಪಿ ಪಕ್ಷದ ವ್ಯಕ್ತಿಯೊಬ್ಬರು ಪ್ರಧಾನಿಯಾಗಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುವ ಇರಾದೆ ಇತ್ತು. ಆದರೆ ಅವಕಾಶವಾಗಿಲ್ಲ. ಹಾಗಿದ್ದರೂ 91ರ ಹೊಸ್ತಿಲಲ್ಲಿರುವ ನನ್ನ ಬಗ್ಗೆ ಗುರುತಿಸಿ ಮಾತನಾಡಿರುವುದೇ ಅತ್ಯಂತ ಖುಷಿಯ ವಿಚಾರವಾಗಿದೆ ಎಂದು ಅವರು ತಿಳಿಸಿದರು.
ಇನ್ನು ಬಿಜೆಪಿ ಪಕ್ಷದ ಪರವಾಗಿ ಸೈಕಲ್ ಮೂಲಕ ಏಕಾಂಗಿಯಾಗಿ ಬೀದಿ ಬೀದಿಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿದ್ದ ರಾಮ್‌ಭಟ್ ಅವರು 1980 ದಶಕದಲ್ಲಿ ಪುತ್ತೂರು ಶಾಸಕರಾಗಿ ಆಯ್ಕೆಗೊಂಡಿದ್ದರು.








