ಉಡುಪಿ : ಮಹಾಮಾರಿ ಕೊರೊನಾ ವೈರಸ್ ಹೊಡೆತಕ್ಕೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಈ ಹೆಮ್ಮಾರಿಯಿಂದಾಗಿ ರಾಜ್ಯದಲ್ಲಿ ನಡೆಯಬೇಕಿದ್ದ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದ್ರೆ ಪೇಜಾವರ ಶ್ರೀಗಳು ಲಾಕ್ ಡೌನ್ ನಡುವೆಯೂ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಹೌದು…! ಸ್ಥಗಿತವಾದ ಪರೀಕ್ಷೆಗಳ ಬಗ್ಗೆ ಸಚಿವರು, ತಜ್ಞರು, ವಿದ್ಯಾರ್ಥಿಗಳು ತಲೆಕೆಡಿಸಿಕೊಂಡಿದ್ದಾರೆ. ಏತನ್ಮಧ್ಯೆ ಪೇಜಾವರ ಮಠದ ಶ್ರೀಗಳು ನಿರಾತಂಕವಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಪೇಜಾವರದ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖುದ್ದಾಗಿ ವಾಟ್ಸಾಪ್ ನಲ್ಲಿ ವಿದ್ಯಾರ್ಥಿಗಳಿಗೆ ಓರಲ್ ಎಕ್ಸಾಂ ನಡೆಸುತ್ತಿದ್ದಾರೆ.
ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಪೇಜಾವರ ಸ್ವಾಮೀಜಿ ಪ್ರಶ್ನೆ ಕೇಳುತ್ತಾರೆ. ವಿದ್ಯಾರ್ಥಿಗಳು ಅದಕ್ಕೆ ಉತ್ತರ ನೀಡುತ್ತಾರೆ. ಕಾವ್ಯ, ವ್ಯಾಕರಣ,ವೇದಾಂತ, ಮೀಮಾಂಸದ ಪ್ರಶ್ನೆಗಳನ್ನು ಶ್ರೀಗಳು ಮಧ್ಯೆ ಮಧ್ಯೆ ಕೇಳುತ್ತಾರೆ. ಇನ್ನು ಒಬ್ಬ ವಿದ್ಯಾರ್ಥಿಗೆ ಪರೀಕ್ಷೆ ಮಾಡಲು ಕನಿಷ್ಠ 2 ಗಂಟೆ ಬೇಕಾಗುತ್ತದೆ. ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯುತ್ತದೆ.








