ಕೋಪಾ ಅಮೆರಿಕಾ ಫೈನಲ್ – ಸೂಪರ್ ಸಂಡೆಯ ಸೂಪರ್ ಮ್ಯಾಚ್ – ಸೂಪರ್ ಸ್ಟಾರ್ ಗಳ ನಡುವಿನ ಬಿಗ್ ಫೈಟ್
ಇದು ಸೂಪರ್ ಸಂಡೆಯ ಸೂಪರ್ ಮ್ಯಾಚ್. ಯೂರೋ ಕಪ್ ಫೈನಲ್ ಪಂದ್ಯಕ್ಕಿಂತಲೂ ಇದು ಹೆಚ್ಚು ಪ್ರಾಮುಕ್ಯತೆಯನ್ನು ಪಡೆದುಕೊಂಡಿದೆ. ಸೂಪರ್ ಸ್ಟಾರ್ ಆಟಗಾರರ ನಡುವಿನ ಹೋರಾಟವನ್ನು ನೋಡಲು ಇಡೀ ಫುಟ್ ಬಾಲ್ ಜಗತ್ತು ಕಾತರದಿಂದ ಕಾಯುತ್ತಿದೆ.
ಹೌದು, ಇದು ಕೋಪಾ ಅಮೇರಿಕಾ ಫುಟ್ ಬಾಲ್ ಟೂರ್ನಿಯ ಫೈನಲ್ ಪಂದ್ಯ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ಮತ್ತು ಹಾಲಿ ಚಾಂಪಿಯನ್ ಬ್ರೇಝಿಲ್ ತಂಡಗಳು ಕಾದಾಟ ನಡೆಸಲಿವೆ.
ವಿಶ್ವ ಫುಟ್ ಬಾಲ್ ನ ಅತ್ಯುತ್ತಮ ಆಟಗಾರ ಲಿಯೊನಾಲ್ ಮೆಸ್ಸಿಗೆ ಇದು ಮಹತ್ವದ ಪಂದ್ಯ. 2007, 2015, 2016ರಲ್ಲಿ ಫೈನಲ್ ಗೆ ಎಂಟ್ರಿಯಾಗಿದ್ದ ಅರ್ಜೆಂಟಿನಾ ತಂಡದಲ್ಲಿ ಮೆಸ್ಸಿ ಆಡಿದ್ರೂ ಕೂಡ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೆಸ್ಸಿ ಚೊಚ್ಚಲ ಕೋಪಾ ಅಮೆರಿಕಾ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.
ಅದೇ ರೀತಿ ನೈಮರ್ ಕೂಡ. 2019ರಲ್ಲಿ ಬ್ರೇಝಿಲ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಆದ್ರೆ ಆ ತಂಡದಲ್ಲಿ ನೈಮರ್ ಗಾಯದಿಂದಾಗಿ ಆಡಿರಲಿಲ್ಲ. ಹೀಗಾಗಿ ನೈಮರ್ ಗೂ ಈ ಫೈನಲ್ ಪಂದ್ಯ ಮಹತ್ವದ್ದಾಗಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಹಂಬದಲ್ಲಿದ್ದಾರೆ.
ಹಾಗೇ ನೋಡಿದ್ರೆ ಕೋಪಾ ಅಮೇರಿಕಾ ಟೂರ್ನಿಗೆ 105 ವರ್ಷಗಳ ಇತಿಹಾಸವಿದೆ. 1916ರಿಂದ ಇಲ್ಲಿಯವರೆಗೆ 46 ಆವೃತ್ತಿಗಳು ನಡೆದಿವೆ. ಇದೀಗ 47ನೇ ಆವೃತ್ತಿ ನಡೆಯುತ್ತಿದೆ.
ಇದ್ರಲ್ಲಿ ಉರುಗ್ವೆ ತಂಡ 15 ಬಾರಿ ಚಾಂಪಿಯನ್ ಪಟ್ಟಕ್ಕೇರಿ ಅತೀ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರವಾಗಿದೆ. ಆರು ಬಾರಿ ರನ್ನರ್ ಅಪ್ , 9 ಬಾರಿ ಮೂರನೇ ಸ್ಥಾನ ಪಡೆದುಕೊಂಡು ಒಟ್ಟು 30 ಬಾರಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಇನ್ನು ಅರ್ಜೆಂಟಿನಾ. ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ್ದ ಹೆಗ್ಗಳಿಕೆ ಅರ್ಜೆಂಟಿನಾ ತಂಡದ್ದು. ಹಾಗೇ 14 ಬಾರಿ ಚಾಂಪಿಯನ್, ಹಾಗೂ 14 ಬಾರಿ ರನ್ನರ್ ಅಪ್ ಮತ್ತು ಐದು ಬಾರಿ ಮೂರನೇ ಸ್ಥಾನವನ್ನು ಪಡೆದುಕೊಂಡು ಒಟ್ಟು 33 ಬಾರಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಹಾಗೇ ಬ್ರೇಝಿಲ್ ತಂಡ 9 ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. 11 ಬಾರಿ ರನ್ನರ್ ಅಪ್ ಹಾಗೂ ಏಳು ಬಾರಿ ಮೂರನೇ ಸ್ಥಾನದೊಂದಿಗೆ ಒಟ್ಟು 27 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
ಇನ್ನುಳಿದಂತೆ, ಪೆರುಗ್ವೆ, ಚಿಲಿ, ಪೆರು ತಲಾ ಎರಡು ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಪೆರುಗ್ವೆ ಎರಡು ಬಾರಿ ಚಾಂಪಿಯನ್, ಆರು ಬಾರಿ ರನ್ನರ್ ಅಪ್, ಏಳು ಬಾರಿ ಮೂರನೇ ಸ್ಥಾನದೊಂದಿಗೆ ಒಟ್ಟು 15 ಬಾರಿ ಪ್ರಶಸ್ತಿ ಗೆದ್ದಿದೆ. ಚಿಲಿ ಎರಡು ಬಾರಿ ಚಾಂಪಿಯನ್, ನಾಲ್ಕು ಬಾರಿ ರನ್ನರ್ ಅಪ್, ಐದು ಬಾರಿ ಮೂರನೇ ಸ್ಥಾನದೊಂದಿಗೆ ಒಟ್ಟು 11 ಬಾರಿ ಪ್ರಶಸ್ತಿ ಪಡೆದಿದೆ. ಪೆರು ತಂಡ ಎರಡು ಬಾರಿ ಚಾಂಪಿಯನ್, ಒಂದು ಬಾರಿ ರನ್ನರ್ ಅಪ್, ಎಂಟು ಬಾರಿ ಮೂರನೇ ಸ್ಥಾನದೊಂದಿಗೆ 11 ಬಾರಿ ಪ್ರಶಸ್ತಿ ಪಡೆದಿದೆ.
ಕೊಲಂಬಿಯಾ, ಬೊಲಿವಿಯಾ ತಲಾ ಒಂದೊಂದು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಕೊಲಂಬಿಯಾ ತಂಡ ಒಂದು ಬಾರಿ ಚಾಂಪಿಯನ್, ಒಂದು ಬಾರಿ ರನ್ನರ್ ಅಪ್, ಐದು ಬಾರಿ ಮೂರನೇ ಸ್ಥಾನದೊಂದಿಗೆ ಒಟ್ಟು ಏಳು ಬಾರಿ ಪ್ರಶಸ್ತಿ ಗೆದ್ದಿದೆ. ಬೊಲಿವಿಯಾ ಒಂದು ಬಾರಿ ಚಾಂಪಿಯನ್, ಒಂದು ಬಾರಿ ರನ್ನರ್ ಅಪ್ ನೊಂದಿಗೆ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. ಮೆಕ್ಸಿಕೊ ಎರಡು ಬಾರಿ ರನ್ನರ್ ಅಪ್ ಮತ್ತು ಮೂರು ಬಾರಿ ಮೂರನೇ ಸ್ಥಾನದೊಂದಿಗೆ ಐದು ಬಾರಿ ಪ್ರಶಸ್ತಿ ಗೆದ್ದಿದೆ. ಹಾಗೇ ಹೊಂಡುರಾಸ್ ಒಂದು ಬಾರಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಒಟ್ಟಾರೆ, ಕೋಪಾ ಅಮೆರಿಕಾ ಟೂರ್ನಿಯಲ್ಲಿ ಎಂಟು ತಂಡಗಳು ಚಾಂಪಿಯನ್ ತಂಡವಾಗಿ ಹೊರಹೊಮ್ಮಿವೆ.
ಇನ್ನು ಕೋಪಾ ಅಮೆರಿಕಾ ಟೂರ್ನಿಯ ಫೈನಲ್ ನಲ್ಲಿ ಬ್ರೇಝಿಲ್ ಮತ್ತು ಅರ್ಜೆಂಟಿನಾ ತಂಡಗಳು ಅತೀ ಹೆಚ್ಚು ಬಾರಿ ಮುಖಾಮುಣಿಯಾಗಿವೆ. ಒಟ್ಟು ಹತ್ತು ಬಾರಿ ಫೈನಲ್ ನಲ್ಲಿ ಹೋರಾಟ ನಡೆಸಿವೆ. ಇದ್ರಲ್ಲಿ ಅರ್ಜೆಂಟಿನಾ ತಂಡ ಎಂಟು ಬಾರಿ ಪ್ರಶಸ್ತಿ ಗೆದ್ರೆ, ಬ್ರೇಝಿಲ್ ಎರಡು ಬಾರಿ ಮಾತ್ರ ಗೆದ್ದುಕೊಂಡಿದೆ. ಅದರಲ್ಲೂ 1991ರವರೆಗೆ ಅರ್ಜೆಂಟಿನಾ ಬ್ರೇಝಿಲ್ ವಿರುದ್ಧ ಫೈನಲ್ ನಲ್ಲಿ ಸೋತಿಲ್ಲ. ಆದ್ರೆ 2004 ಮತ್ತು 2007ರ ಫೈನಲ್ ನಲ್ಲಿ ಅರ್ಜೆಂಟಿನಾ ಬ್ರೇಝಿಲ್ ಗೆ ಶರಣಾಗಿದೆ. ಒಟ್ಟಾರೆ, ಈ ಬಾರಿಯ ಕೋಪಾ ಅಮೆರಿಕಾ ಫುಟ್ ಬಾಲ್ ಫೈನಲ್ ಪಂದ್ಯ ಮೆಸ್ಸಿ ಮತ್ತು ನೈಮರ್ ಗೆ ಪ್ರತಿಷ್ಠೆಯ ಕಣವಾಗಿದೆ