ಕೆಆರ್‍ಎಸ್ ಬಿರುಕು ಬಿಟ್ಟಿರುವುದು ಸತ್ಯ : ಸುಮಲತಾ
ಮಂಡ್ಯ: ಕೆಆರ್‍ಎಸ್ ಬಿರುಕು ಬಿಟ್ಟಿರುವುದು ಸತ್ಯ ಎಂದು ಸಂಸದೆ ಸುಮಲತಾ ಅಂಬರೀಶ್ ಪುನರುಚ್ಚರಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ಯಾಂ ಎಷ್ಟು ಲೈನ್ ಇದೆ, ಎಷ್ಟು ವಿಸ್ತಾರವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲಿ ಸಣ್ಣಪುಟ್ಟ ಬಿರುಕು ಕೂಡ ಆಗುತ್ತೆ. ಏರ್ ಕ್ರ್ಯಾಕ್ ಅಂತಾ ಕೂಡ ಹೇಳ್ತಾರೆ. ಗ್ರೌಟಿಂಗ್ ಮೂಲಕ ಅದನ್ನು ಮುಚ್ಚುತ್ತಾರೆ. ಆದರೆ ಬಿರುಕಾಗಿರೋದು ಸತ್ಯ, ಅದನ್ನು ಗ್ರೌಟಿಂಗ್ ಮೂಲಕ ಮುಚ್ಚುತ್ತಿದ್ದಾರೆ ಎಂದು ತಿಳಿಸಿದರು.
ಕ್ರ್ಯಾಕ್ ಆಗುವ ಮುಂಚೆ ಎಚ್ಚರಿಕೆ ವಹಿಸಬೇಕಿದೆ. ಕೊರೊನಾ ಬಂದು 10 ದಿನದ ನಂತರ ಆಸ್ಪತ್ರೆಗೆ ಹೋದ್ರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಸುಮಲತಾ, ಮೊದಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಹಾಗೆ ಇದು ಕೂಡ ಇವತ್ತು, ನಾಳೆ ಅಪಾಯ ಇಲ್ಲ. ಐದು, ಹತ್ತು ವರ್ಷದ ನಂತರ ಅಪಾಯವಾದರೆ ಯಾರು ಹೊಣೆ. ಕೆಆರ್‍ಎಸ್ ಅಣೆಕಟ್ಟೆಯ 20 ಕಿ.ಮೀ. ರೆಡಿಯಸ್ ನಲ್ಲಿ ಗಣಿಗಾರಿಕೆ ನಡೆಯಬಾರದು. ಈಗಾಗಲೇ ಈ ಬಗ್ಗೆ ಮೈನಿಂಗ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ನಾನು ಲೀಗಲ್ ಆಗಿರೋ ಗಣಿಗಾರಿಕೆ ರದ್ದು ಮಾಡಿ ಅಂತಾ ಹೇಳಿಲ್ಲ. ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಾಗುವ ರೀತಿ ಇದ್ದರೆ ಗಣಿಗಾರಿಕೆ ಬೇಡ ಎಂದು ಹೇಳಿದ್ದೇನೆ. ಆರಂಭದಿಂದಲೂ ನನ್ನ ಹೇಳಿಕೆಯನ್ನು ತಿರುಚಲಾಗುತ್ತಿದೆ. ನನ್ನ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ ಎಂದು ಹೇಳಿದರು.









