ನನಗೇನು ಗೊತ್ತಿಲ್ಲ : ಇಂದ್ರಜಿತ್ ಆರೋಪದ ಬಗ್ಗೆ ಸಂದೇಶ್ ನಾಗರಾಜ್ ಮಾತು
ಬೆಂಗಳೂರು : ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಅಲ್ಲಿನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ನಗೇನು ಗೊತ್ತಿಲ್ಲ. ನನಗೆ ಈ ಬಗ್ಗೆ ಕೇಳಬೇಡಿ ಎಂದಿದ್ದಾರೆ.
ಸುದ್ದಿವಾಹಿನಿ ಜೊತೆ ಈ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಇವತ್ತೇ ಟಿವಿಯಲ್ಲಿ ನೋಡುತ್ತಿದ್ದೇನೆ. ನಾನು ಹೋಟೆಲ್ ನಲ್ಲಿ ಅಂದು ಇರಲಿಲ್ಲ. ಪ್ರಕರಣ ನಡೆದಿದೆ ಎಂದು ಹೋಟೆಲ್ ನವರು ಅಥವಾ ಹೋಟೆಲ್ ನಲ್ಲಿ ಹೊಡೆಸಿಕೊಂಡವರಾದರು ಹೇಳಬೇಕು. ಆದರೆ ಇಬ್ಬರೂ ಕೂಡ ಆ ಬಗ್ಗೆ ಹೇಳಿಲ್ಲ. ಇಂದ್ರಜಿತ್ ಲಂಕೇಶ್ ರವರು ಮಾಡುತ್ತಿರುವ ಆರೋಪದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

ಇನ್ನು ದರ್ಶನ್ ಹಲ್ಲೆ ವಿಚಾರವಾಗಿ ಇಂದ್ರಜಿತ್ ಲಂಕೇಶ್ ಅವರು ಇಂದು ಗೃಹ ಸಚಿವರನ್ನು ಭೇಟಿ ಮಾಡಿ ದೂರು ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲಿನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೇಟರ್ ಕಣ್ಣುಗಳಿಗೆ ಹಾನಿಯಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.








