ಕೆಲಸ ಮಾಡುವುದರಲ್ಲಿ ಯಡಿಯೂರಪ್ಪ ನಂಬರ್ ಒನ್ : ಆರ್.ಅಶೋಕ್
ಬೆಂಗಳೂರು : ಜನರ ಪರವಾಗಿ ನಿಲ್ಲುವ ಗುಣ ಯಡಿಯೂರಪ್ಪ ಅವರಿಗೆ ರಕ್ತಗತವಾಗಿಯೇ ಬಂದಿದೆ. ಯಡಿಯೂರಪ್ಪ ಕೆಲಸ ಮಾಡುವುದರಲ್ಲಿ ನಂಬರ್ ಒನ್ ಎಂದು ಕಂದಾಯ ಸಚಿವ ಆರ್.ಅಶೋಕ್ ಸಿಎಂ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದ್ದಾರೆ.
ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಪರವಾಗಿ ನಿಲ್ಲುವ ಗುಣ ಯಡಿಯೂರಪ್ಪ ಅವರಿಗೆ ರಕ್ತಗತವಾಗಿಯೇ ಬಂದಿದೆ. ಯಾವುದೇ ಸಮಸ್ಯೆ ಬಂದರೂ ಜನಪರ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಯಡಿಯೂರಪ್ಪ ಕೆಲಸ ಮಾಡುವುದರಲ್ಲಿ ನಂಬರ್ ಒನ್.
ಅವರು ರೈತ ಪರವಾಗಿ ಹೋರಾಟ ಮಾಡಿ, ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ಹೋರಾಟದಿಂದಲೇ ಬಂದಿರುವ ಯಡಿಯೂರಪ್ಪನವರು ದೇಹದಲ್ಲಿ ರಕ್ತ ಇರೋವರೆಗೂ ಜನಪರ ಕೆಲಸ ಮಾಡುತ್ತಾರೆ ಎಂದು ಕೊಂಡಾಡಿದರು.
ಇದೇ ವೇಳೆ ನಾಯಕತ್ವ ಕುರಿತು ಹೈಕಮಾಂಡ್ ಸೂಚನೆ ವಿಚಾರ ಮಾತನಾಡಿ, ಇಂದು ಹೈಕಮಾಂಡ್ ನಿಂದ ಸಂದೇಶ ಬರುವ ಬಗ್ಗೆ ನನಗೆ ಗೊತ್ತಿಲ್ಲ. ಆ ರೀತಿಯ ಸಂದೇಶದ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರದ ಮಾಹಿತಿ ಕುರಿತು ನೀವು ಸಿಎಂ ಬಳಿಯೇ ಕೇಳಬೇಕು ಎಂದರು.










