ಮಂಡ್ಯ : ಮಂಡ್ಯದಲ್ಲಿ ಕೊರೊನಾ ಪರೀಕ್ಷೆ ನಡೆಸುತ್ತಿದ್ದ ವೇಳೆ ಅಡ್ಡಿಪಡಿಸಿ, ಗಲಾಟೆ ಮಾಡಿದ ಎಂಎಲ್ ಸಿ ಕೆ.ಟಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರನ ವಿರುದ್ಧ ಸಂಸದೆ ಸುಮಲತಾ ಅವರು ಕಿಡಿಕಾರಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿ ಗಲಾಟೆ ಮಾಡುವವರಿಗೆ ಎಂಎಲ್ ಸಿ ಆಗಿ ಮುಂದುವರೆಯಲು ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿದ್ದ ಪತ್ರಕರ್ತರ ಕೋವಿಡ್-19 ಪರೀಕ್ಷೆಗೆ ಅಡ್ಡಿಪಡಿಸಿ, ಗೂಂಡಾಗಿರಿ ಮೆರೆದಿದ್ದು ಖಂಡನೀಯ. ಶ್ರೀಕಂಠೇಗೌಡರು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ, ಅದನ್ನು ಅವರು ಎದುರಿಸಲೇಬೇಕು ಎಂದು ಹರಿಹಾಯ್ದರು.
ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಹೀಗೆ ಗಲಾಟೆ ಮಾಡಿದರೆ ಈ ಘಟನೆಗೂ ಪಾದರಾಯನಪುರದಲ್ಲಿ ನಡೆದ ಘಟನೆಗೂ ಏನು ವ್ಯತ್ಯಾಸ. ಇಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದರೆ ನಿಮಗೂ ಕೊರೊನಾ ಬರುತ್ತೆ, ಇದನ್ನು ವಿರೋಧಿಸಿ ಎಂದು ಶ್ರೀಕಂಠೆಗೌಡರು ಸ್ಥಳೀಯರಿಗೆ ಹೇಳಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ. ಇದು ಬಹಳ ಶೋಷನೀಯ. ಒಬ್ಬರು ಎಂಎಲ್ ಸಿ ಆಗಿ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದರೆ ಅವರ ಶಿಕ್ಷಣ ಹಾಗೂ ಮಾಹಿತಿ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆ ಎನ್ನೋದನ್ನ ನಾವು ಪ್ರಶ್ನಿಸಬೇಕಾಗಿದೆ ಎಂದರು








