ಜನಿಸಿದ್ದು ಉಚಿತ ಆದರೆ ಮರಣ ನಿಶ್ಚಿತ
ಪರಮಾರ್ಥಿಕ ಸತ್ಯ;
ಮನುಷ್ಯ ಅನಿಶ್ಚಿತ ಮನುಷ್ಯತ್ವವೊಂದೇ ಶಾಶ್ವತ
ಸೋಂಕಿಗೆ ಸಾಯದೇ ಉಳಿದವರು
ಸತ್ತ ವಿವೇಕಶೂನ್ಯತೆಯ ನೋವಿನಿಂದ
ಮಾರಿಕೊಂಡ ಆತ್ಮಸಾಕ್ಷಿಯ ಕೊರಗಿನಿಂದ
ನಿತ್ಯ ಉಣ್ಣುವ ಹಾಲಾಹಲದ ಪಿತ್ತ ಪ್ರಕೋಪದಿಂದ
ತಾವೇ ಹರಿತಗೊಳಿಸಿದ ಎರಡಲುಗಿನ ಚೂಪು ಕತ್ತಿಯ ಇರಿತದಿಂದ
ಇಂದಲ್ಲದಿದ್ದರೂ ನಾಳೆ ಭಯಾನಕವಾಗಿ ಸಾಯುತ್ತಾರೆ
ನಿಮ್ಮಗಳ ಪ್ರಜ್ಞಾವಂತಿಕೆಯ ಶವ ಇಂಚಿಂಚಾಗಿ ಕೊಳೆತು ನಾರುತ್ತಿದೆ
ಕಂಕಾಳವಾಗಿ ಕರಗಿ ಮಣ್ಣಾಗುವ ಮೊದಲು ಕಣ್ಣು ಬಿಡಿ
ಇದರಿಂದ ಹಬ್ಬುವ ವೈರಸ್ ಕರೋನಾಗಿಂತ
ಕ್ಷುದ್ರ ಭೀಕರ ಮಾರಣಾಂತಿಕ
ತಮ್ಮ ತೆವುಲುಗಳಿಗೆ ಮುಗ್ದರನ್ನು ಬಲಿಪೀಠಕ್ಕೆ ಎಳೆದೊಯ್ಯುವ ರಣಮಾರಿಗಳು
ನಿಮ್ಮ ಸುತ್ತ ಕೋಟೆ ಕಟ್ಟುತ್ತಿವೆ ಎಚ್ಚರ!
ರಕ್ತಪಿಪಾಸುಗಳ ತೀರದ ನೆತ್ತರ ದಾಹಕ್ಕೆಷ್ಟು ರುಧಿರಾಭಿಷೇಕ ಮಾಡಿಸುವಿರಿ
ನಾಳೆ ಅಲ್ಲಿ ಹರಿವ ರಕ್ತ ನಿಮ್ಮದೇ ಆಗಿರಬಹುದು
ಉರಿವ ಹೆಣದ ಮೇಲೆ ಹಬ್ಬದೊಬ್ಬಟ್ಟು ಬೇಯಿಸುವ ನೀಚರೊಡನಾಟಕ್ಕೆ ಹೊರಟವರೇ
ಮಸಣದಲಿ ಕುಣಿ ತೋಡಿಟ್ಟುಕೊಂಡೇ ಹೊರಡಿ ದಿಗ್ವಿಜಯಕೆ
ನೀವಿಂದು ತಯಾರಿಸುವ ಶವಪೆಟ್ಟಿಗೆಯಲಿ
ಕಟ್ಟಕಡೆಯದ್ದು ನಿಮ್ಮದೇ ಆಗಿರುತ್ತೆ ನೆನಪಿಡಿ
ನಿಮ್ಮಗಳ ಪಾರ್ಥಿವ ಶರೀರ ಹೊರುವಷ್ಟಾದರೂ ಜನರನ್ನುಳಿಸಿ
ಇದೇ ಕರೋನಾ ಕಾಲದ ನನ್ನ ವಿನಮ್ರ ಪ್ರಾರ್ಥನೆ
-ವಿಭಾ
***








