ರೈತ ನಾಯಕ ಬೂಕನಕೆರೆ ಯಡಿಯೂರಪ್ಪನವರ ರಾಜಕೀಯ ಹೆಜ್ಜೆ ಗುರುತು
ರಾಜಕೀಯ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡ ಸಂಘ ಪರಿವಾರದ ಶಿಸ್ತಿನ ಸಿಪಾಯಿ ಬಿ.ಎಸ್.ಯಡಿಯೂರಪ್ಪನವರು ಸ್ವಂತ ಬಲದಿಂದ ರಾಜ್ಯದ ಜನತೆಯ ನಂಬಿಕೆಯನ್ನು ಗಳಿಸಿದ ಛಲಗಾರ.
ಇವರು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ದಕ್ಷಿಣ ಭಾರತದಲ್ಲಿ ಸವಾಲುಗಳ ವಿರುದ್ಧ ಹೋರಾಟ ಮಾಡುತ್ತಾ ಪ್ರಪ್ರಥಮ ಬಾರಿಗೆ ಭಾರತೀಯ ಅಧಿಪತ್ಯ ಸ್ಥಾಪಿಸಲು ಯಶಸ್ವಿಯಾದವರು.
ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಜೀವನ ಪ್ರಾರಂಭವಾದದ್ದು ರೈತ ಹೋರಾಟದಿಂದ.
ಮಂಡ್ಯ ಜಿಲ್ಲೆಯ ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿದ ಯಡಿಯೂರಪ್ಪ ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮದಿಂದ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕ.

1943ರ ಫೆಬ್ರುವರಿ 27ರಂದು ಮಂಡ್ಯದ ಬೂಕನಕೆರೆ ಗ್ರಾಮದಲ್ಲಿ ಜನಿಸಿದ ಯಡಿಯೂರಪ್ಪನವರು ಕಲಾ ವಿಭಾಗದಲ್ಲಿ ಪದವಿ ಪಡೆದ ಬಳಿಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣಾಭಿವೃದ್ಧಿ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಶಿಕಾರಿಪುರದ ಶಂಕರ ರೈಸ್ ಮಿಲ್ ನಲ್ಲಿ ಕ್ಲರ್ಕ್ ಕೆಲಸ ದೊರೆತ ಕಾರಣ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಶಿಕಾರಿಪುರಕ್ಕೆ ಬಂದು ನೆಲೆಸಿದ್ದರು. ಅಕ್ಕಿ ಮಿಲ್ ಮಾಲೀಕರ ಮಗಳಾದ ಮೈತ್ರಾದೇವಿಯನ್ನು
ಪ್ರೇಮಿಸಿ ಮದುವೆಯಾದ ಯಡಿಯೂರಪ್ಪನವರು ನಂತರದ ದಿನಗಳಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರಾಗಿ ಸೇರಿಕೊಂಡರು. ಆರ್ ಆರ್ ಎಸ್ ಜೊತೆಗಿನ ನಿಕಟ ಸಂಪರ್ಕ ಯಡಿಯೂರಪ್ಪನವರ ರಾಜಕೀಯಕ್ಕೆ ಪ್ರವೇಶಕ್ಕೆ ಕಾರಣವಾಯಿತು.
1973ರಲ್ಲಿ ಶಿಕಾರಿಪುರ ಪುರಸಭೆಗೆ ಕೌನ್ಸಿಲರ್ ಆಗಿ ಆಯ್ಕೆಯಾದ ಅವರು 1980 ರಲ್ಲಿ ಬಿಜೆಪಿ ಪಕ್ಷ ರಚನೆ ಆದಾಗ ಶಿಕಾರಿಪುರ ತಾಲೂಕಿನ ಪಕ್ಷದ ಅಧ್ಯಕ್ಷರಾಗಿ ಆಯ್ಕೆ
1983ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾದ ಯಡಿಯೂರಪ್ಪನವರು 1985ರಿಂದ 1988ರವರೆಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಆದರೆ 1987ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡಿದಾಗ, ಇಡೀ ಜಿಲ್ಲೆಯನ್ನು ಸೈಕಲ್ ಮೂಲಕ ತಿರುಗಿ ಜನರ ಕಷ್ಟವನ್ನು ಆಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ ಯಡಿಯೂರಪ್ಪನವರು ಜನರ ವಿಶ್ವಾಸ ಗಳಿಸಲು ಶಕ್ತರಾದರು.

1994 ರಲ್ಲಿ ಮೊದಲ ಬಾರಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಅವರು 2000ನೇ ಇಸವಿಯಲ್ಲಿ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾದರು.
2004ರಲ್ಲಿ ಬಿಜೆಪಿ 79 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ರಾಜ್ಯದಲ್ಲಿ ಏಕೈಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.. ಪ್ರಾರಂಭದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಬೆಂಬಲ ಹಿಂಪಡೆದು ಭಾರತೀಯ ಜನತಾ ಪಕ್ಷದ ಜತೆ ಕೈಜೋಡಿಸುವ ಮೂಲಕ 20 : 20 ಸರ್ಕಾರ ರಚನೆಯಾಯಿತು.
2007 ರ ನವೆಂಬರ್ ನಲ್ಲಿ ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರೂ, ಪಿತೃ ವಾಕ್ಯ ಪರಿಪಾಲನೆಯ ನೆಪವೊಡ್ಡಿ ಕುಮಾರಸ್ವಾಮಿ ಬೆಂಬಲ ಹಿಂಪಡೆದ ಪರಿಣಾಮ, ಕೇವಲ ಏಳು ದಿನಗಳ ಸಿಎಂ ಆಗಿದ್ದ ಬಿಎಸ್ ವೈ ಅಧಿಕಾರದಿಂದ ಕೆಳಗಿಳಿಯುವಂತಾಗಿತ್ತು
2008 ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಕುತಂತ್ರವನ್ನರಿತ ಜನ ಸಾಮಾನ್ಯರು 45000 ಕಿಂತ ಅಧಿಕ ಮತಗಳಿಂದ ಬಿ ಜೆ ಪಿಯನ್ನು ಆಯ್ಕೆ ಮಾಡಿದರು. ಮೊದಲ ಬಾರಿ ಬಹುಮತದಿಂದ ಬಿಜೆಪಿಯು ಅಧಿಕಾರದ ಗದ್ದುಗೆ ಏರಿದಾಗ 2 ನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಆದರೆ ಅಕ್ರಮ ಗಣಿಗಾರಿಕೆಯಲ್ಲಿ ಬಿಎಸ್ ವೈ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ 2011 ರ ಜುಲೈಯಂದು ರಾಜೀನಾಮೆ ನೀಡಿದರು. 2012 ನವೆಂಬರ್ ನಲ್ಲಿ ಕೆಜೆಪಿ ಪಕ್ಷ ರಚನೆಯಾದರೂ ರಾಷ್ಟ್ರ ರಾಜಕಾರಣದ ಬದಲಾದ ಪರಿಸ್ಥಿಯಲ್ಲಿ ಮೋದಿಯ ಮಾತಿಗೆ ಒಪ್ಪಿ 2014 ರಲ್ಲಿ ಕೆಜೆಪಿ ಯನ್ನು ಬಿಜೆಪಿ ಜೊತೆ ವಿಲೀನ ಮಾಡಿದರು.
2018 ರ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸೀಟ್ ಗಳಿಸಿ ಅವರು ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ, ಬಹುಮತ ಪಡೆಯಲು ವಿಫಲರಾದರು.
2019 ಜುಲೈ ನಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಡಿದೆದ್ದ ನಾಯಕರ ಕೃಪಾಕಟಾಕ್ಷದಿಂದ ಆಪರೇಷನ್ ಕಮಲದ ಮೂಲಕ ಮತ್ತೆ 4 ನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದರು.

ಇದೀಗ ಎರಡು ವರ್ಷಗಳ ನಂತರ 75 ವರ್ಷ ದಾಟಿದವರಿಗೆ ಸ್ಥಾನಮಾನವಿಲ್ಲ ಎಂಬ ಪಕ್ಷದ ನಿರ್ಧಾರಕ್ಕೆ ಒಲ್ಲದ ಮನಸ್ಸಿನಿಂದ ಓಗೊಟ್ಟು ಅವರು ರಾಜೀನಾಮೆ ನೀಡಿದ್ದಾರೆ.
ರಾಜಕೀಯದ ಏಳು ಬೀಳುಗಳನ್ನು ಕಂಡು ನಾಲ್ಕು ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಬಿಎಸ್ ಯಡಿಯೂರಪ್ಪನವರು ಅಧಿಕಾರಾವಧಿಯಲ್ಲಿ ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಿದರು. ಪ್ರವಾಹ, ಕೋವಿಡ್, ಅನೇಕ ರೀತಿಯ ಮುಷ್ಕರಗಳು ಅವರ ನಿದ್ದೆಗೆಡಿಸಿದರೂ ಎದೆಗುಂದದೆ ಎಲ್ಲವನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿ ನಿಭಾಯಿಸಿದ ಸರದಾರ, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಶಿಸ್ತಿನ ಸಿಪಾಯಿಯಾಗಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
#Politicalfootprint #BukkanakereYeddyurappa







