ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ : ಪ್ರಮಾಣವಚನ ಬಳಿಕ ಬೊಮ್ಮಾಯಿ ಮಾತು
ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ, ಸರ್ಕಾರದ ಸೌಲಭ್ಯ ಸಿಗುವಂತೆ ಮತ್ತು ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸಲು ಮುಖ್ಯಮಂತ್ರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯದ ಜನತೆ ಎರಡು ಬಾರಿ ಕೋವಿಡ್ ಸಂಕಷ್ಟವನ್ನು ಮತ್ತು ಅತಿವೃಷ್ಟಿಯಿಂದ ಪ್ರವಾಹ, ನೆರೆ ಪರಿಸ್ಥಿತಿಯನ್ನು ಎದುರಿಸಿದ್ದಾರೆ.
ನಾನು ಇಂದು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅನೇಕ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳು ಸಾಕಷ್ಟಿವೆ.
ಈ ಸಂದರ್ಭದಲ್ಲಿ ನಮ್ಮ ಪಕ್ಷದಲ್ಲಿರುವ ಎಲ್ಲಾ ನಾಯಕರನ್ನು ಒಗ್ಗೂಡಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುತ್ತೇನೆ, ಜನಪರ ಆಡಳಿತ ನೀಡುವುದು ನಮ್ಮ ಗುರಿಯಾಗಿದೆ ಎಂದರು.
ಅಲ್ಲದೆ ಸಂಜೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ, ಅವರ ಮತ್ತು ಕೇಂದ್ರ ವರಿಷ್ಠರ ಸಲಹೆಗಳನ್ನು ಪಡೆದು ಮುಂದಿನ ಕೆಲಸಕ್ಕೆ ಕಾಲಿಡುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.