ನವದೆಹಲಿ : ಮೇ 3 ಕ್ಕೆ ಲಾಕ್ ಡೌನ್ 2.0 ಮುಕ್ತಾಯವಾಗಲಿದ್ದು, ಲಾಕ್ ಡೌನ್ ಮುಂದುವರಿಸಬೇಕಾ..? ಬೇಡ್ವಾ..? ಲಾಕ್ ಡೌನ್ ನಲ್ಲಿ ಇನ್ನೆಷ್ಟು ಸಡಿಲಿಕೆ ಮಾಡಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಇಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಇನ್ನುಳಿದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಗೃಹ ಸಚಿವ ಅಮಿತ್ ಷಾ ಕೂಡ ಉಪಸ್ಥಿತರಿದ್ದರು.
ಮೊದಲು ಮಾತು ಆರಂಭಿಸಿದ ಮೋದಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ನಿಂದ ತುಂಬ ಸಹಾಯವಾಗುತ್ತಿದೆ ಎಂದು ಹೇಳಿದರು. ಅಲ್ಲದೆ, ಕೊರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರದೊಂದಿಗೆ ಎಲ್ಲ ರಾಜ್ಯಗಳೂ ಒಗ್ಗಟ್ಟಾಗಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗೇ ಆಯಾ ರಾಜ್ಯಗಳಲ್ಲಿ ಸಾರ್ವಜನಿಕರ ಆರೋಗ್ಯ, ಲಾಕ್ ಡೌನ್ ಪರಿಸ್ಥಿತಿ ನಿಭಾಯಿಸುತ್ತಿರುವ ಎಲ್ಲ ಮುಖ್ಯಮಂತ್ರಿಗಳನ್ನೂ ಹೊಗಳಿದ್ದಾರೆ.
ಇನ್ನು ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ. ಮೇ 16ರವರೆಗೆ ಲಾಕ್ ಡೌನ್ ಇರಲಿ, ಆದರೆ ಮೇ 3ರ ಬಳಿಕ ಗ್ರೀನ್ ಝೋನ್ ಗಳಲ್ಲಿ ಶೇ.50ರಷ್ಟು ಸಡಿಲಿಕೆ ಆದರೆ ಒಳಿತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಮೇ 3ರ ನಂತರವೂ ಮುಂದುವರಿಯುವುದು ಬಹುತೇಕ ಖಚಿತ ಎನ್ನಲಾಗಿದೆ.








