ಬೆಂಗಳೂರು : ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್ ಡೌನ್ ಪರಿಣಾಮ ರಾಜ್ಯ ವ್ಯಾಪಿ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರ ನೆರವಿಗೆ ರಾಜ್ಯ ಸರಕಾರ ಬರಬೇಕು. ಜತೆಗೆ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಹಣ್ಣು, ತರಕಾರಿ, ಹೂವು ಬೆಳೆದು ಸಂಕಷ್ಟಕ್ಕೆ ಸಿಲುಕಿ ನಷ್ಟಕ್ಕೆ ಗುರಿಯಾಗಿರುವ ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಸೇರಿ ರಾಜ್ಯದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮನವಿ ಮಾಡಿದ್ದಾರೆ.
ಇನ್ನು ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿ ಒಂದು ತಿಂಗಳು ಮುಟ್ಟಿದೆ. ಈ ಸಂದರ್ಭದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ತೊಂದರೆಗೊಳಗಾಗಿದ್ದು, ಈ ಬಗ್ಗೆಯೂ ಸರಕಾರ ಕ್ರಮ ಕೈಗೊಳ್ಳಬೇಕೆಂದು ಹೆಚ್ ಡಿಡಿ ಒತ್ತಾಯಿಸಿದ್ದಾರೆ.







