ಭಾರತ – ಇಂಗ್ಲೆಂಡ್ 2ನೇ ಟೆಸ್ಟ್ -ರಿಸಲ್ಟ್ ಏನಾಗಬಹುದು.. ?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಅಂತಿಮ ದಿನ ಸಾಕಷ್ಟು ರೋಚಕತೆಯನ್ನು ಪಡೆದುಕೊಂಡಿದೆ. ಉಭಯ ತಂಡಗಳು ನಾಟಕೀಯ ಕುಸಿತವನ್ನು ಕಂಡ್ರೆ ಪಂದ್ಯದ ಅಂತಿಮ ದಿನ ಸ್ಪಷ್ಟ ಫಲಿತಾಂಶವನ್ನು ಕಾಣಬಹುದು. ಇಲ್ಲದೇ ಇದ್ರೆ ಡ್ರಾನಲ್ಲಿ ಅಂತ್ಯಗೊಳ್ಳುವುದು ಖಚಿತ.
ಹೌದು, ಪಂದ್ಯದ ನಾಲ್ಕನೇ ದಿನ ಟೀಮ್ ಇಂಡಿಯಾಗೆ ತನ್ನ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಬೌಲರ್ ಗಳು ಕಂಟಕವಾಗಿ ಪರಿಣಮಿಸಿದ್ರು. 27 ರನ್ ಗಳ ಹಿನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ಕೆ.ಎಲ್ ರಾಹುಲ್, (5 ರನ್), ರೋಹಿತ್ ಶರ್ಮಾ (21 ರನ್) ಅವರಿಗೆ ಮಾರ್ಕ್ ವುಡ್ ಪೆವಿಲಿಯನ್ ದಾರಿ ತೋರಿಸಿದ್ರು. ಹಾಗೇ ನಾಯಕ ವಿರಾಟ್ ಕೊಹ್ಲಿ (20 ರನ್ ) ಸ್ಯಾಮ್ ಕುರನ್ ಗೆ ಬಲಿಯಾದ್ರು.
ನಂತರ ತಂಡಕ್ಕೆ ಆಧಾರವಾಗಿ ನಿಂತಿದ್ದು ಚೇತೇಶ್ವರ ಪೂಜಾರ ಮತ್ತು ಉಪನಾಯಕ ಅಜಿಂಕ್ಯ ರಹಾನೆ. ಟೀಕೆ ಮಾಡಿದವರಿಗೆ ತಕ್ಕ ಉತ್ತರ ನೀಡಿದ್ದ ಪೂಜಾರ ಮತ್ತು ರಹಾನೆ ತಾವೆಷ್ಟು ಟೆಸ್ಟ್ ತಂಡಕ್ಕೆ ಉಪಯುಕ್ತ ಬ್ಯಾಟ್ಸ್ ಮೆನ್ ಗಳು ಎಂಬುದನ್ನು ಸಾಬೀತುಪಡಿಸುವಂತೆ ಬ್ಯಾಟಿಂಗ್ ನಡೆಸಿದ್ರು. ಅಲ್ಲದೆ ನಾಲ್ಕನೇ ವಿಕೆಟ್ ಗೆ 100 ರನ್ ಗಳ ಜೊತೆಯಾಟವನ್ನು ಆಡಿದ್ದರು.
ಆದ್ರೆ ಈ ಹಂತದಲ್ಲಿ ಚೇತೇಶ್ವರ ಪೂಜಾರ 45 ರನ್ ಗಳಿಸಿ ಮಾರ್ಕ್ ವುಡ್ ಗೆ ವಿಕೆಟ್ ಒಪ್ಪಿಸಿದ್ರು. ಪೂಜಾರ 206 ಎಸೆತಗಳನ್ನು ಎದುರಿಸಿದ್ದು ನಾಲ್ಕು ಬೌಂಡರಿಗಳನ್ನು ಸಿಡಿಸಿದ್ರು. ಇನ್ನೊಂದೆಡೆ ಅಜಿಂಕ್ಯ ರಹಾನೆ ಕೂಡ ಆಕರ್ಷಕ ಅರ್ಧಶತಕ ದಾಖಲಿಸಿ ಮೋಯಿನ್ ಆಲಿಗೆ ಬಲಿಯಾದ್ರು. ತಾಳ್ಮೆಯಿಂದಲೇ ಆಡಿದ್ದ ರಹಾನೆ 146 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 61 ರನ್ ದಾಖಲಿಸಿದ್ರು.
ಮತ್ತೊಂದೆಡೆ ರವೀಂದ್ರ ಜಡೇಜಾ ಮೂರು ರನ್ ದಾಖಲಿಸಿ ಮೋಯಿನ್ ಆಲಿಗೆ ಕ್ಲೀನ್ ಬೌಲ್ಡ್ ಆದ್ರು. ರಿಷಬ್ ಪಂತ್ ಅಜೇಯ 14 ರನ್ ಮತ್ತು ಇಶಾಂತ್ ಶರ್ಮಾ ಅಜೇಯ 4 ರನ್ ಗಳೊಂದಿಗೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಮ್ ಇಂಡಿಯಾ ನಾಲ್ಕನೇ ದಿನದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 181 ರನ್ ದಾಖಲಿಸಿದೆ.
ಟೀಮ್ ಇಂಡಿಯಾ ಮೊದಲ ಇನಿಂಗ್ಸ್ – 364
ಇಂಗ್ಲೆಂಡ್ ಮೊದಲ ಇನಿಂಗ್ಸ್ – 391
ಇಂಗ್ಲೆಂಡ್ ಗೆ 27 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ
ಟೀಮ್ ಇಂಡಿಯಾ 2ನೇ ಇನಿಂಗ್ಸ -6 ವಿಕೆಟ್ ಗೆ 181