ಮಾನವನ ದೇಹದೊಳಗೆ ಮಾರಣಾಂತಿಕ ಕೊರೊನಾ ವೈರಸ್ ಹೇಗೆ ಪ್ರವೇಶಿಸುತ್ತದೆ ಎಂಬುದು ಇಲ್ಲಿಯವರೆಗೂ ಸ್ಪಷ್ಟವಾಗಿ ತಿಳಿದಿಲ್ಲ. ಈ ನಡುವೆ ಲೈಂಗಿಕ ಕ್ರಿಯೆಯಿಂದ ಕೊರೊನಾ ವೈರಸ್ ಹರಡುತ್ತಾ ಎಂಬ ಅನುಮಾನ ಶುರುವಾಗಿದೆ. ಈ ಬಗ್ಗೆ ಚೀನಾದಲ್ಲಿ ನಡೆದ ಒಂದು ಅಧ್ಯಯನ ಉತ್ತರ ನೀಡಿದ್ದು, ಹೊಸ ಸಂಶೋಧನೆಯು ಸೆಕ್ಸ್ ನಿಂದ ಸೋಂಕು ಹರಡುವುದಿಲ್ಲ ಎಂದು ತಿಳಿಸಿದೆ.
ಈ ಕುರಿತು ಇತ್ತೀಚೆಗೆ ಆನ್ ಲೈನ್ ಜರ್ನಲ್ ಫರ್ಟಿಲಿಟಿ ಅಂಡ್ ಸ್ಟೆರಿಲಿಟಿ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ. ಚೀನಾದಲ್ಲಿ ಕೊರೊನಾ ಸೋಂಕಿತ 34 ಪುರುಷರಿಂದ ವೀರ್ಯ ಮಾದರಿಗಳನ್ನು ಸಂಶೋಧಕರು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರು. ರಿಪೋರ್ಟ್ ನಲ್ಲಿ ಯಾವುದೇ ವೀರ್ಯ ಮಾದರಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಜೊತೆಗೆ ಪುರುಷರ ವೃಷಣಗಳಲ್ಲಿ ವೈರಸ್ ಇರುವುದಿಲ್ಲ ಎಂದು ಹೇಳಿದೆ.
ಈ ಸಣ್ಣ, ಪ್ರಾಥಮಿಕ ಅಧ್ಯಯನದಲ್ಲಿ ಇದು ಕೊರೊನಾ ವೈರಸ್ ವೃಷಣಗಳಲ್ಲಿ ಅಥವಾ ವೀರ್ಯದಲ್ಲಿ ಕಾಣಿಸುವುದಿಲ್ಲ ಎಂಬುದು ಒಂದು ಪ್ರಮುಖ ಶೋಧನೆಯಾಗಿದೆ ಎಂದು ಅಮೆರಿಕದ ಉತಾಹ್ ವಿಶ್ವವಿದ್ಯಾಲಯದ ಸಹ-ಪ್ರಾದ್ಯಾಪಕ ಡಾ.ಜೇಮ್ಸ್ ಹೊಟಾಲಿಂಗ್ ತಿಳಿಸಿದ್ದಾರೆ.
ಕೊರೊನಾ ಲೈಂಗಿಕವಾಗಿ ಹರಡಿದರೆ ಅದು ರೋಗ ತಡೆಗಟ್ಟುವಿಕೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಮನುಷ್ಯನಿಗೆ ಸುದೀರ್ಘ ಕಾಲ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಕೊರೊನಾದಿಂದ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಹರಡಬಹುದು. ಇದು ವೀರ್ಯಕ್ಕೆ ಸೋಂಕು ತಗಲುವ ಹೆಚ್ಚಿನ ಸಂಭವನೀಯತೆಗೆ ಕಾರಣವಾಗಬಹುದು. ಅದಕ್ಕೆ ನಮ್ಮಲ್ಲಿ ಈಗ ಉತ್ತರವಿಲ್ಲ ಎಂದು ಹೊಟಾಲಿಂಗ್ ತಿಳಿಸಿದ್ದಾರೆ.








