ತಾಲಿಬಾನ್ ಹಿಡಿತದ ಅಫ್ಘಾನ್ ನಲ್ಲಿದ್ದಾರೆ 200 ಮಂದಿ ಭಾರತೀಯರು
ನವದೆಹಲಿ : ಇತಿಹಾಸದ ದುರಂತ ಕ್ಷಣಗಳಿಗೆ ಅಫ್ಘಾನ್ ಸಾಕ್ಷಿಯಾಗುತ್ತಿದ್ದು, ತಾಲಿಬಾನ್ ಗಳು ಅಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ.
ಭಾನುವಾರವೇ ತಾಲಿಬಾನ್ ಗಳು ಕಾಬೂಲ್ ಅನ್ನು ವಶಕ್ಕೆ ಪಡೆದಿದ್ದು, ಇಡೀ ಅಫ್ಘಾನ್ ಮೇಲೆ ಹಿಡಿತ ಸಾಧಿಸಿದ್ದಾರೆ. ಅಲ್ಲಿನ ಪ್ರಜೆಗಳು ಪ್ರಾಣಭಯದಲ್ಲಿ ಕಾಲಕಳೆಯುತ್ತಿದ್ದಾರೆ.
ಈ ಮಧ್ಯೆ ಅಫ್ಘಾನ್ ನ ಪರಿಸ್ಥಿತಿ ವಿವಿಧ ದೇಶಗಳಲ್ಲಿ ಆತಂಕ ಮೂಡಿಸಿದ್ದು, ದೇಶದಲ್ಲಿ ಸಿಲುಕಿರುವ ತನ್ನ ನಾಡಿನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಸರ್ಕಾರಗಳು ಪ್ರಯತ್ನವನ್ನು ನಡೆಸುತ್ತಿವೆ.
ಅದರಂತೆ 126 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾನುವಾರ ಕಾಬೂಲ್ನಿಂದ ನವದೆಹಲಿಗೆ ಬಂದಿದೆ.
ಆದರೂ ಸುಮಾರು 200 ಕ್ಕೂ ಹೆಚ್ಚು ಮಂದಿ ಭಾರತೀಯರು ಅಫ್ಘಾನಿಸ್ತಾನದಲ್ಲಿ ಇದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇವರಲ್ಲಿ ವಿದೇಶಾಂಗ ಇಲಾಖೆಯ ಉದ್ಯೋಗಿಗಳು ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿಗಳು ಸಹ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಇವರೆಲ್ಲರೂ ಕಾಬೂಲ್ ನಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನ ಇದ್ದರೂ ಅಲ್ಲಿಗೆ ಕಾಬೂಲ್ನ ಇಂಡಿಯನ್ ಮಿಷನ್ ಕಾಪೌಂಡ್ನಲ್ಲಿರುವ ಭಾರತೀಯರನ್ನು ಕರೆತರುವುದು ಹೇಗೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಯಾಕೆಂದರೇ ಭಾನುವಾರ ಕಾಲೂಬ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ತಾಲಿಬಾನಿಗಳು ನಗರದ ಪೂರ್ತಿ ಕಫ್ರ್ಯೂ ವಿಧಿಸಿ, ಬಂದೂಕಿನಿಂದ ಮಾತನಾಡುತ್ತಿದ್ದಾರೆ.