ತಾಲಿಬಾನ್ ತೆಕ್ಕೆಯಲ್ಲಿ ಅಫ್ಘಾನ್ : ಬೈಡೆನ್ ಹೇಳಿದ್ದೇನು..?
ವಾಷಿಂಗ್ಟನ್ : 20 ವರ್ಷಗಳ ಬಳಿಕ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಪತ್ಯ ಸಾಧಿಸಿದ್ದು, ಇತಿಹಾಸ ಕಂಡರಿಯದ ದುರಂತಗಳಿಗೆ ಅಲ್ಲಿನ ಜನರು ಸಾಕ್ಷಿಯಾಗುತ್ತಿದ್ದಾರೆ.
ಭಾನುವಾರ ತಾಲಿಬಾನಿಗಳು ಕಾಬೂಲ್ ಅನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಲ್ಲಿನ ಸರ್ಕಾರ ಪತನಗೊಂಡಿದೆ. ಅಲ್ಲಿನ ಜನರು ಪ್ರಾಣ ಭಯದಿಂದ ಬೇರೆ ದೇಶಗಳತ್ತ ಓಡುತ್ತಿದ್ದಾರೆ.
ಈ ಮಧ್ಯೆ ಅಫ್ಘಾನಲ್ಲಿದ್ದ ಅಮೇರಿಕಾ ಸೈನ್ಯವನ್ನು ಜೋ ಬೈಡೆನ್ ವಾಪಸ್ ಕರೆಸಿಕೊಂಡಿದ್ದು, ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಇದೀಗ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಪ್ರತಿಕ್ರಿಯೆ ನೀಡಿದ್ದು, ಅಫ್ಘಾನಿಸ್ತಾನ ರಾಷ್ಟ್ರದಿಂದ ತಮ್ಮ ಸೇನೆಯಲನ್ನು ಹಿಂಪಡೆದುಕೊಂಡು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೆ ಅಫ್ಘಾನಿಸ್ತಾನದಲ್ಲಿ ಈಗಿನ ಪರಿಸ್ಥಿತಿಗೆ ಅಲ್ಲಿನ ನಾಯಕರೇ ಹೊಣೆ ಎಂದು ದೂರಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಾವು ಇಂಥಹ ಪರಿಸ್ಥಿತಿಯನ್ನು ನಿರೀಕ್ಷೆ ಮಾಡಿದ್ದೆವು. ಆದರೆ ಆ ಪರಿಸ್ಥಿತಿ ಇಷ್ಟು ಬೇಗ ಬರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ.
ಆಫ್ಘನ್ ನಾಯಕರೇ ಆ ದೇಶವನ್ನು ತಾಲಿಬಾನಿಗಳಿಗೆ ಬಿಟ್ಟುಕೊಟ್ಟು, ದೇಶವನ್ನು ತೊರೆದಿದ್ದಾರೆ. ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಸಾಕಷ್ಟು ಬೇಸರವನ್ನು ತಂದಿದೆ.
ಆದರೆ ನನ್ನ ನಿರ್ಧಾರದ ಕುರಿತು ಯಾವುದೇ ರೀತಿಯ ವಿಷಾದವಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ಅಮೆರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಜೋ ಬೈಡೆನ್ ನಡೆಯನ್ನು ಖಂಡಿಸಿದ್ದು, ರಾಜೀನಾಮೆಗೆ ಆಗ್ರಹಿಸಿದ್ದಾರೆ.









