ಯಾವುದು ಶಾಶ್ವತವಲ್ಲ : ತಾಲಿಬಾನಿಗಳಿಗೆ ನಮೋ ವಾರ್ನಿಂಗ್
ನವದೆಹಲಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹುಚ್ಚಾಟ ಮುಂದುವರೆದಿದೆ. ಇದನ್ನ ವಿಶ್ವದ ಅನೇಕ ರಾಷ್ಟ್ರಗಳು ಖಂಡಿಸುತ್ತಿವೆ.
ಅದರಂತೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿಧ್ವಂಸಕ ಶಕ್ತಿಗಳು ಭಯೋತ್ಪಾದನೆಯ ಮೂಲಕ ಕೆಲಕಾಲ ಅಧಿಕಾರ ಹೊಂದಿದ್ದರೂ, ಅವರ ಅಸ್ತಿತ್ವ ಶಾಶ್ವತವಾಗಿರುವುದಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತಿನ ಐತಿಹಾಸಿಕ ಸೋಮನಾಥ ದೇವಸ್ಥಾನಕ್ಕೆ ಸಂಬಂಧಿಸಿದ 83 ಕೋಟಿ ರೂಪಾಯಿಗಳ ಹಲವು ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡುತ್ತಾ ಸೋಮನಾಥ ದೇವಾಲಯದ ಮೇಲೆ ನಡೆದಿದ್ದಂತಹ ದಾಳಿಯನ್ನು ಮೋದಿ ನೆನಪಿಸಿಕೊಂಡರು.
ಸೋಮನಾಥ ದೇವಸ್ಥಾನವನ್ನು ಹಲವು ಬಾರಿ ಧ್ವಂಸ ಮಾಡಲಾಗಿದೆ. ವಿಗ್ರಹಗಳನ್ನು ಅಪವಿತ್ರಗೊಳಿಸಲಾಗಿದೆ.
ದೇವಸ್ಥಾನ ನಾಶ ಮಾಡಲು ಯತ್ನಿಸಿದರು. ಆದರೆ, ದಾಳಿ ಮಾಡಿದ ಪ್ರತಿಬಾರಿಯೂ ಮತ್ತೆ ತನ್ನ ವೈಭವವನ್ನು ದೇವಾಲಯ ಪ್ರದರ್ಶಿಸುತ್ತಲ್ಲೇ ಇದೆ.
ನಮಗೆ ಇದು ಆತ್ಮ ವಿಶ್ವಾಸವನ್ನು ನೀಡುತ್ತಿದೆ. ಅದೇ ರೀತಿ ವಿಧ್ವಂಸಕ ಶಕ್ತಿಗಳು ಕೆಲಕಾಲ ಅಧಿಕಾರ ಹೊಂದಿದ್ದರೂ, ಅದು ಶಾಶ್ವರವಲ್ಲ. ಮಾನವೀಯತೆಯನ್ನು ಹತ್ತಿಕ್ಕಲು ಎಂದಿಗೂ ಸಾಧ್ಯವಿಲ್ಲ ಎಂದರು.









