ಚಿತ್ರದುರ್ಗ: ಕಾಡಿನಲ್ಲಿರಬೇಕಾದ ಮೃಗಗಳು ಈಗ ನಾಡಿಗೆ ಬಂದಂತಾಗಿದೆ. ಆಹಾರ ಅರಸಿ ನಾಡಿಗೆ ಬಂದು ಜನರ ಬದುಕಿನೊಂದಿಗೆ ಆಟವಾಡುತ್ತಿವೆ. ನಗರದಲ್ಲಿನ (Chitradurga) ಶಾಂತಿನಗರದ ಜನವಸತಿ ಪ್ರದೇಶಕ್ಕೆ ಕರಡಿ ಎಂಟ್ರಿ ಕೊಟ್ಟಿದ್ದು, ಜನರು ಆತಂಕದಲ್ಲಿದ್ದಾರೆ.
ಮಾಳಪ್ಪನಹಟ್ಟಿ ಬಳಿಯ ಶಾಂತಿನಗರದಲ್ಲಿ (Shantinagar) ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಇಲ್ಲಿನ ಜನರು ಹೆಚ್ಚಾಗಿ ಓಡಾಡುತ್ತಿರುತ್ತಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಸಂಚರಿಸುತ್ತಿರುತ್ತಾರೆ. ಆದರೆ, ಈ ಬಡಾವಣೆ ಪಕ್ಕದಲ್ಲಿರುವ ಬನ್ನಿಮರದ ಬಳಿಗೆ ಕರಡಿಯೊಂದು (Bear) ಬರುತ್ತಿದೆ. ಕೈಗೆ ಸಿಗುವ ಆಹಾರ ಸೇವಿಸಿ ಪರಾರಿಯಾಗುತ್ತಿದೆ.
ಕರಡಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಸುದ್ದಿ ಕೇಳಿ ಜನರು ಭಯಭೀತರಾಗಿದ್ದಾರೆ.
ಈ ಬಡಾವಣೆಯ ಮಕ್ಕಳು, ಮಹಿಳೆಯರು ಸಂಜೆಯಾದರೆ ಮನೆಯೊಳಗೆ ಅಡಗಿಕೊಳ್ಳಲಿದ್ದು, ಭಯದಿಂದ ಬದುಕುವ ವಾತಾವರಣವಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.