ವಿಜಯಪುರ: ಬಿಜೆಪಿ ಕಾರ್ಯಕರ್ತರೊಬ್ಬರ ಉಪಚುನಾವಣಾ ಫಲಿತಾಂಶಕ್ಕೆ ಬೇಸರ ವ್ಯಕ್ತಪಡಿಸಿ ಟಿವಿ ಒಡೆದು ಹಾಕಿರುವ ಘಟನೆ ನಡೆದಿದೆ.
ಈ ಘಟನೆ ವಿಜಯಪುರ (Vijayapura) ಜಿಲ್ಲೆಯ ಕೋಲ್ಹಾರ (Kolhar) ಪಟ್ಟಣದಲ್ಲಿ ನಡೆದಿದೆ. ರಾಜ್ಯದಲ್ಲಿ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಆದರೆ, ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಕೋಲ್ಹಾರ ಪಟ್ಟಣದ ನಿವಾಸಿ ಹಾಗೂ ಬಿಜೆಪಿ (BJP) ಕಾರ್ಯಕರ್ತರಾದ ವೀರಭದ್ರಪ್ಪ ಭಾಗಿ ಚುನಾವಣಾ ಫಲಿತಾಂಶ ಕಂಡು ಬೇಸರದಿಂದ ಟಿವಿ ಎಸೆದು ತಮ್ಮ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವಿನ ಭಿನ್ನಮತದಿಂದಲೇ ಈ ಸೋಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾಯಕರ ನಡುವಿನ ಬಿರುಕು, ಕಾರ್ಯಕರ್ತರಲ್ಲಿ ಆಕ್ರೋಶ ಉಂಟಾಗುವಂತೆ ಮಾಡಿದೆ. ಬಿಜೆಪಿ ನಾಯಕರಲ್ಲಿ ಒಗ್ಗಟಿನ ಕೊರತೆಯಿಂದ ಈ ಹೀನಾಯ ಸೋಲಿಗೆ ಕಾರಣವಾಗಿದೆ. ಕೂಡಲೇ ವರಿಷ್ಠರು ಈ ಗುಂಪುಗಾರಿಕೆಯನ್ನು ಶಮನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.








