ಹೈದರಾಬಾದ್: ಸಾವನ್ನಪ್ಪಿರುವ ಮಗನೊಂದಿಗೆ ನಾಲ್ಕು ದಿನ ಅಂಧ ತಂದೆ- ತಾಯಿ ಕಾಲ ಕಳೆದಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಈ ಘಟನೆ ಹೈದರಾಬಾದ್ ನ (Hyderabad) ಬ್ಲೈಂಡ್ಸ್ ಕಾಲೋನಿಯಲ್ಲಿ ನಡೆದಿದೆ. 30 ವರ್ಷದ ಪ್ರಮೋದ್ ಸಾವನ್ನಪ್ಪಿರುವ ವ್ಯಕ್ತಿ. ಪತಿ ನಿವೃತ್ತ ಸರ್ಕಾರಿ ನೌಕರ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ (60) ಮೇಲ್ಪಟ್ಟ ವೃದ್ಧರು ಎನ್ನಲಾಗಿದೆ. ಆದರೆ, ಇವರು ದೃಷ್ಟಿ ವಿಕಲಚೇತನರಾಗಿದ್ದರು. ದಂಪತಿ ತಮ್ಮ ಮಗ ಪ್ರಮೋದ್ನೊಂದಿಗೆ ಹೈದರಾಬಾದ್ನ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಮಗ ಸಾವನ್ನಪ್ಪಿ 4 ದಿನದ ಬಳಿಕ ಅಕ್ಕಪಕ್ಕದವರು ಅವರ ಮನೆಯಿಂದ ಬರುತ್ತಿದ್ದ ದುರ್ವಾಸನೆಯಿಂದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಾಗೋಲೆ ಪೊಲೀಸ್ ಠಾಣೆಯ ಅಧಿಕಾರಿ ಸೂರ್ಯ ನಾಯಕ್ ಮಾತನಾಡಿ, ವಿಚ್ಛೇದನದ ನಂತರ ಪ್ರಮೋದ್ ಪತ್ನಿ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಆತನನ್ನು ಬಿಟ್ಟು ಹೋಗಿದ್ದಳು. ಪತ್ನಿ ಬಿಟ್ಟು ಹೋದ ನಂತರ ಮೋದ್ ಮದ್ಯವ್ಯಸನಿಯಾಗಿದ್ದ. ದಂಪತಿಗಳು ಆತನನ್ನು ಊಟಕ್ಕಾಗಿ ಕರೆದಾಗ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರ ಧ್ವನಿ ತುಂಬಾ ದುರ್ಬಲವಾಗಿದ್ದ ಕಾರಣ ಅವರ ಧ್ವನಿ ನೆರೆಹೊರೆಯವರಿಗೆ ಕೇಳಿಸಿಲ್ಲ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ರಮಣ ಮತ್ತು ಶಾಂತಿಕುಮಾರಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ನಂತರ ಅವರಿಗೆ ಉಪಚಾರ ಮಾಡಲಾಯಿತು. ಅವರ ಹಿರಿಯ ಮಗ ಪ್ರದೀಪ್ ಹೈದರಾಬಾದ್ನ ಇನ್ನೊಂದು ಕಡೆ ವಾಸಿಸುತ್ತಿದ್ದು, ದಂಪತಿಯನ್ನು ಅವರ ಹಿರಿಯ ಮಗನಿಗೆ ಒಪ್ಪಿಸಲಾಯಿತು ಎಂದು ಹೇಳಿದ್ದಾರೆ.