ವಾಷಿಂಗ್ಟನ್: ಅಮೆರಿಕ ಚುನಾವಣೆ (USA Election) ಯ ಹಿನ್ನೆಲೆಯಲ್ಲಿ ಇಡೀ ಜಗತ್ತು ಅಮೆರಿಕದತ್ತ ನೋಡುತ್ತಿದೆ. ಈ ಮಧ್ಯೆ ಕಮಲಾ ಹ್ಯಾರಿಸ್‌ಗೆ (Kamala Harris) ಅನಿವಾಸಿ ಭಾರತೀಯರು (NRI) ಶಾಕ್ ನೀಡುವ ಸಾಧ್ಯತೆ ಹೆಚ್ಚಿದೆ.
ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಡೆಮಾಕ್ರಟಿಕ್ (Democratic) ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಈ ಬಾರಿ ಅನಿವಾಸಿ ಭಾರತೀಯರ ಒಲವು ರಿಪಬ್ಲಿಕನ್ (Republican) ಪಕ್ಷದ ಕಡೆಗೆ ವಾಲಿದೆ. ಹೀಗಿದ್ದರೂ ಒಟ್ಟಾರೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್‌ಗೆ ಮತ ಹಾಕುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಭಾರತೀಯ ಅಮೆರಿಕರನ್ನು ಗುರಿಯಾಗಿಸಿ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್’ ಸಂಸ್ಥೆ ನಡೆಸಿದ ಅನ್‌ಲೈನ್ ಸಮೀಕ್ಷೆಯಲ್ಲಿ ಶೇ. 61ರಷ್ಟು ಜನ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ನೀಡಿದರೆ ಶೇ. 32 ರಷ್ಟು ಜನರು ರಿಪಬ್ಲಿಕನ್ ಪಕ್ಷದ ಪರ ಒಲವು ತೋರಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಕಡೆಗೆ ಭಾರತೀಯರು ಚಲಾಯಿಸಿದ್ದ ಮತಗಳನ್ನು ಲೆಕ್ಕ ಹಾಕಿದಾಗ ಈ ಬಾರಿ ಕಮಲಾ ಹ್ಯಾರಿಸ್ ಪಕ್ಷದ ಪರ ಒಲವು ಸ್ವಲ್ಪ ಇಳಿದಿದ್ದು, ಟ್ರಂಪ್ (Donald Trump) ಪರ ಹೆಚ್ಚು ಮತಗಳು ವಾಲಿವೆ ಎನ್ನಲಾಗುತ್ತಿದೆ. ಅಮೆರಿಕದಲ್ಲಿ ಭಾರತ ಮೂಲದ 52 ಲಕ್ಷ ಜನ ವಾಸವಾಗಿದ್ದು, ಈ ಪೈಕಿ 39 ಲಕ್ಷ ಜನರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಭಾರತೀಯರು ಅಮೆರಿಕದಲ್ಲಿ ನೆಲೆಸಿರುವ ಎರಡನೇ ಅತಿ ದೊಡ್ಡ ವಲಸಿಗರ ಗುಂಪಿಗೆ ಸೇರಿದ್ದಾರೆ. ನ. 5ರಂದು ಅಮೆರಿಕದಲ್ಲಿ ಮತದಾನ ನಡೆಯಲಿದೆ.








