ಮುಂಬೈ, – ಷೇರು ಮಾರುಕಟ್ಟೆಯಲ್ಲಿ ಈ ಬಾರಿ ದೀಪಾವಳಿ ಅಕ್ಟೋಬರ್ ನಲ್ಲಿಯೇ ಬಂದಂಥ ಸಂಭ್ರಮ ಕಂಡುಬಂದಿದೆ. ಲಿಸ್ಟಿಂಗ್ ಆದ ಮೊದಲ ದಿನವೇ ಜಿಯೋ ಪ್ಲಾಟ್‌ಫಾರ್ಮ್ಸ್ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಬುಧವಾರದಂದು ಜಿಯೋ ಪ್ಲಾಟ್ ಫಾರ್ಮ್ಸ್ ಷೇರು ₹1,419ಕ್ಕೆ ಏರಿಕೆಯಾಗಿ, ₹1,119ರ ಐಪಿಒ ಬೆಲೆಗಿಂತ ₹300 (ಶೇಕಡಾ 26.81) ಹೆಚ್ಚಾಗಿ ವಹಿವಾಟು ಮುಗಿಸಿತು. ಇದರಿಂದ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು ₹2.76 ಲಕ್ಷ ಕೋಟಿ ಸೇರ್ಪಡೆಯಾಗಿ, ಮಾರುಕಟ್ಟೆ ಬಂಡವಾಳ ಅಂದಾಜು ₹13.07 ಲಕ್ಷ ಕೋಟಿಗೆ ತಲುಪಿತು.
ಲಿಸ್ಟಿಂಗ್‌ನಲ್ಲೇ ಭರ್ಜರಿ ಆರಂಭ
ಜಿಯೋ ಷೇರು ₹1,358ಕ್ಕೆ ಲಿಸ್ಟ್ ಆಯಿತು. ಇದು ಇಶ್ಯೂ ಬೆಲೆಗಿಂತ ಶೇಕಡಾ 21.4ರಷ್ಟು ಪ್ರೀಮಿಯಂ. ಆ ನಂತರದ ವಹಿವಾಟಿನಲ್ಲೂ ಮುಂದುವರಿದು ಷೇರು ಲಿಸ್ಟಿಂಗ್ ಬೆಲೆಗಿಂತ ₹61 (ಶೇ 4.49) ಮತ್ತಷ್ಟು ಏರಿತು. ದೀಪಾವಳಿಗೆ ಮುನ್ನವೇ ಹೂಡಿಕೆದಾರರಿಗೆ ಹಬ್ಬದ ಸಂಭ್ರಮ ತಂದಂತಾಗಿದೆ.
ಮೌಲ್ಯಮಾಪನದ ಲೆಕ್ಕಾಚಾರ
ಐಪಿಒ ನಂತರದ ಸುಮಾರು 920.90 ಕೋಟಿ ಷೇರುಗಳ ಆಧಾರದ ಮೇಲೆ, ₹1,119ರ ಐಪಿಒ ಬೆಲೆಯಲ್ಲಿ ಜಿಯೋದ ಮೌಲ್ಯ ಸುಮಾರು ₹10.3 ಲಕ್ಷ ಕೋಟಿ ಆಗಿತ್ತು. ಷೇರು ₹1,419ಕ್ಕೆ ಏರಿದಾಗ ಇದು ಸುಮಾರು ₹13.07 ಲಕ್ಷ ಕೋಟಿಗೆ ಹೆಚ್ಚಿತು. ಅಂದರೆ ಸುಮಾರು ₹2.76 ಲಕ್ಷ ಕೋಟಿ (ಸುಮಾರು 29 ಬಿಲಿಯನ್ ಡಾಲರ್) ಹೆಚ್ಚಳ. ಇದು ಕಂಪನಿಯ ಒಟ್ಟು ಷೇರುಗಳ ಮೌಲ್ಯದಲ್ಲಾದ ಹೆಚ್ಚಳವನ್ನು ಸೂಚಿಸುತ್ತದೆ. ಭಾರತೀಯ ಕಂಪನಿಯೊಂದು ಲಿಸ್ಟಿಂಗ್ ದಿನ ಹೂಡಿಕೆದಾರರ ಸಂಪತ್ತಿಗೆ ಸೇರಿಸಿದ ಅತಿದೊಡ್ಡ ಮೊತ್ತ ಇದು ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
ದೇಶದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿ
ಮೊದಲ ದಿನವೇ ಜಿಯೋ ದೇಶದ ಎರಡನೇ ಅತಿ ಹೆಚ್ಚು ಮೌಲ್ಯದ ಲಿಸ್ಟೆಡ್ ಕಂಪನಿಯಾಗಿ ಹೊರಹೊಮ್ಮಿದೆ:
1. ರಿಲಯನ್ಸ್ ಇಂಡಸ್ಟ್ರೀಸ್: ಸುಮಾರು ₹15.67 ಲಕ್ಷ ಕೋಟಿ
2. ಜಿಯೋ ಪ್ಲಾಟ್‌ಫಾರ್ಮ್ಸ್: ₹13.07 ಲಕ್ಷ ಕೋಟಿ
3. ಭಾರ್ತಿ ಏರ್‌ಟೆಲ್: ಸುಮಾರು ₹12.16 ಲಕ್ಷ ಕೋಟಿ
4. ಎಚ್‌ಡಿಎಫ್‌ಸಿ ಬ್ಯಾಂಕ್: ಸುಮಾರು ₹10.57 ಲಕ್ಷ ಕೋಟಿ
5. ಐಸಿಐಸಿಐ ಬ್ಯಾಂಕ್: ಸುಮಾರು ₹9.89 ಲಕ್ಷ ಕೋಟಿ
ಜಿಯೋ ಪ್ರವೇಶದಿಂದ ಟಾಟಾ ಸಮೂಹದ ಪ್ರಮುಖ ಐಟಿ ಕಂಪನಿ ಟಿಸಿಎಸ್ ಮೊದಲ ಐದು ಸ್ಥಾನಗಳ ಪಟ್ಟಿಯಿಂದ ಹೊರಬಿದ್ದಿದೆ. ಜಿಯೋದ ಮಾರುಕಟ್ಟೆ ಮೌಲ್ಯ ಈಗ ಭಾರ್ತಿ ಏರ್‌ಟೆಲ್‌ಗಿಂತ ಸುಮಾರು ₹80,000 ಕೋಟಿ ಹೆಚ್ಚಿದೆ. ಇದರ ಜೊತೆಗೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹವು ಮೌಲ್ಯದ ದೃಷ್ಟಿಯಿಂದ ಟಾಟಾ ಸಮೂಹವನ್ನು ಹಿಂದಿಕ್ಕಿ ದೇಶದ ಅತಿದೊಡ್ಡ ಕಾರ್ಪೊರೇಟ್ ಸಮೂಹವಾಗಿದೆ.
ಬಲವಾದ ವಹಿವಾಟು, ಹೂಡಿಕೆದಾರರ ಆಸಕ್ತಿ:
ಲಿಸ್ಟಿಂಗ್ ದಿನ ಜಿಯೋ ಷೇರಿನಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಯಿತು. ಎನ್‌ಎಸ್‌ಇ ಮತ್ತು ಬಿಎಸ್‌ಇ ಸೇರಿ ₹26,000 ಕೋಟಿಗೂ ಹೆಚ್ಚು ಮೌಲ್ಯದ ಷೇರುಗಳು ಕೈಬದಲಾದವು. ಡೆಲಿವರಿ ಆಧಾರಿತ ಖರೀದಿಯ ಪ್ರಮಾಣ ಶೇಕಡಾ 70ಕ್ಕಿಂತ ಹೆಚ್ಚಿತ್ತು. ಇದು ಅಲ್ಪಾವಧಿಯ ಊಹಾತ್ಮಕ ವಹಿವಾಟಿಗಿಂತ ದೀರ್ಘಾವಧಿ ಹೂಡಿಕೆಯ ಆಸಕ್ತಿಯನ್ನು ತೋರಿಸುತ್ತದೆ.
ಭಾರತದ ಅತಿದೊಡ್ಡ ಐಪಿಒ ಎಂದು ಗುರುತಿಸಲಾದ ಈ ಆಫರ್‌ನಲ್ಲಿ ಷೇರುಗಳನ್ನು ₹1,119ರಂತೆ ಹಂಚಿಕೆ ಮಾಡಲಾಗಿತ್ತು. ಜಿಯೋದ ಯಶಸ್ವಿ ಐಪಿಒ ಮತ್ತು ಲಿಸ್ಟಿಂಗ್ ದಿನದ ಗಳಿಕೆಯು ಜಾಗತಿಕ ಮಟ್ಟದ ತಂತ್ರಜ್ಞಾನ ಉದ್ಯಮವನ್ನು ಕಟ್ಟುವ, ಭಾರಿ ಸಾಂಸ್ಥಿಕ ಬಂಡವಾಳವನ್ನು ಆಕರ್ಷಿಸುವ ಹಾಗೂ ಕೋಟ್ಯಂತರ ಜನರಿಗೆ ಸೇವೆ ನೀಡುವ ಡಿಜಿಟಲ್ ಮೂಲಸೌಕರ್ಯ ರೂಪಿಸುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಕಂಪನಿ ಹೇಳಿದೆ.







