ಲಕ್ನೋ: ಲೋಕಸಭಾ ಚುನಾವಣೆಯ ಎಲ್ಲೆಡೆ ವಿಜೃಂಭಿಸುತ್ತಿದೆ. ಅಭ್ಯರ್ಥಿಗಳು ಈಗಾಗಲೇ ಮತ ಯಾಚಿಸುವ ಕಾರ್ಯ ಮಾಡುತ್ತಿದ್ದಾರೆ. ಭಿನ್ನ ವಿಭಿನ್ನವಾಗಿ ಹಲವರು ಮತ ಯಾಚಿಸುತ್ತಿದ್ದಾರೆ. ಉತ್ತರಪ್ರದೇಶದ ಅಲಿಗಢ್‌ನಲ್ಲಿ ಅಭ್ಯರ್ಥಿಯೊಬ್ಬರು ಚಪ್ಪಲಿ ಹಾರ ಹಾಕಿಕೊಂಡು ಮತ ಯಾಚಿಸುತ್ತಿದ್ದಾರೆ.
ಸ್ವತಂತ್ರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಗೌತಮ್ ಚಪ್ಪಲಿ ಹಾರ ಹಾಕಿಕೊಂಡು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಹೂವಿನ ಹಾರದ ಬದಲು ಚಪ್ಪಲಿ ಹಾರ ಹಾಕಿಕೊಂಡು ಮತ ಯಾಚಿಸುತ್ತ ಜನರಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ಪಂಡಿತ್ ಕೇಶವ್ ದೇವ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರ ಚಿಹ್ನೆ ಚಪ್ಪಲಿಯಾಗಿದೆ. ಸ್ವತಃ ಕೇಶವ್ ದೇವ್ ಚಪ್ಪಲಿ ಚಿಹ್ನೆಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿಯೇ ಕೊರಳಿಗೆ 7 ಚಪ್ಪಲಿಗಳ ಹಾರ ಹಾಕಿಕೊಂಡು ಪ್ರಚಾರ ಆರಂಭಿಸಿದ್ದಾರೆ.
ಕೇಶವ್ ಆರ್ ಟಿಐ ಕಾರ್ಯಕರ್ತ. ಪಂಡಿತ್ ಕೇಶವ್ ದೇವ್ ಅವರು ಭಾರತೀಯ ಹಿಂದೂ ರಾಷ್ಟ್ರ ಸೇನೆ ಮತ್ತು ಭ್ರಷ್ಟಾಚಾರ ವಿರೋಧಿ ಸೇನೆ ಎಂಬ ಸಂಘಟನೆಗ ನಡೆಸುತ್ತಿದ್ದಾರೆ. ಅವರು ಹಲವು ಬಾರಿ ಈಗಾಗಲೇ ಚುನಾವಣೆಗೆ ಸ್ಪರ್ಧಿಸಿ ಸುದ್ದಿಯಾಗಿದ್ದಾರೆ. ಅಲಿಗಢ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಏಪ್ರಿಲ್ 26ರಂದು ಚುನಾವಣೆ ನಡೆಯಲಿದೆ. ಆ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.