ಲಕ್ನೋ: ಬಿಜೆಪಿ ಕಾರ್ಪೊರೇಟರ್ (BJP Corporator) ಒಬ್ಬರ ಮಗ ಆನ್ ಲೈನ್ (Online) ಮೂಲಕ ಪಾಕಿಸ್ತಾನಿ (Pakistan) ಹುಡುಗಿಯನ್ನು ವರಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಜೌನ್‌ಪುರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
‘ನಿಕಾಹ್’ ಮೂಲಕ ಪಾಕ್ ಯುವತಿಯೊಂದಿಗೆ ವಿವಾಹ ನೆರವೇರಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರು ತಮ್ಮ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್‌ಗೆ ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರೊಂದಿಗೆ ವಿವಾಹ ಪಕ್ಕಾ ಮಾಡಿದ್ದರು. ಆದರೆ, ಎರಡೂ ರಾಷ್ಟ್ರಗಳ ಮಧ್ಯೆ ರಾಜಕೀಯ ಉದ್ವಿಗ್ನತೆ ಇರುವ ಹಿನ್ನೆಲೆಯಲ್ಲಿ ಈ ರೀತಿ ಮದುವೆ ಮಾಡಿಸಿದ್ದಾರೆ.
ರಾಜಕೀಯ ಉದ್ವಿಗ್ನತೆಯಿಂದಾಗಿ ವರನಿಗೆ ವೀಸಾ ಸಿಕ್ಕಿರಲಿಲ್ಲ. ಇನ್ನೊಂದೆಡೆ ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅನಾರೋಗ್ಯಕ್ಕೆ ಒಳಗಾಗಿ ಪಾಕಿಸ್ತಾನದ ಐಸಿಯುಗೆ ದಾಖಲಾದರು. ಹೀಗಾಗಿ ಆನ್ ಲೈನ್ ಮೂಲಕ ಮದುವೆ ಸಮಾರಂಭ ಮಾಡಲಾಗಿದೆ.
ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ಇಸ್ಲಾಂನಲ್ಲಿ ‘ನಿಕಾಹ್’ಗೆ ಮಹಿಳೆಯ ಒಪ್ಪಿಗೆ ಅತ್ಯಗತ್ಯ. ಎರಡೂ ಕಡೆಯ ಮೌಲಾನಾಗಳು ಒಟ್ಟಾಗಿ ಸಮಾರಂಭ ನಡೆಸಿದ ಮೇಲೆ ಈ ರೀತಿ ಮದುವೆ ಮಾಡಲಾಗಿದೆ ಎಂದಿದ್ದಾರೆ.








