ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದ ಭಾರತದ ಭಾರತದ ನೀರಜ್ ಚೋಪ್ರಾ (Neeraj Chopra) ಪ್ಯಾರಿಸ್ ಒಲಿಂಪಿಕ್ಸ್‌ನ ಜಾವೆಲಿನ್ (Javelin) ಎಸೆತದಲ್ಲಿ ಬೆಳ್ಳಿ (Silver) ಗೆ ತೃಪ್ತಿ ಪಟ್ಟಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ.
ನೀರಜ್ ಚೋಪ್ರಾ 89.45 ಮೀಟರ್ ದೂರ ಎಸೆದರೆ ಪಾಕಿಸ್ತಾನದ ಅರ್ಶದ್ ನದೀಂ (Arshad Nadeem) 92.97 ಮೀಟರ್ ದೂರ ಎಸೆದು ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಗ್ರೆನೆಡಾದ ಆ್ಯಂಡರ್ಸನ್ ಪೀಟರ್ 88.54 ಮೀಟರ್ಸ್ ದೂರ ಎಸೆದು ಕಂಚು ಗೆದ್ದಿದ್ದಾರೆ.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದರು. 6 ಅವಕಾಶಗಳ ಪೈಕಿ 5 ಪ್ರಯತ್ನಗಳಲ್ಲಿ ಫೌಲ್ ಆಗಿದ್ದ ನೀರಜ್ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆದು ಬೆಳ್ಳಿ ಖಾತ್ರಿ ಮಾಡಿಕೊಂಡಿದ್ದರು.ನೀರಾಜ್ ಬೆಳ್ಳಿ ಗೆಲ್ಲುವುದರೊಂದಿಗೆ ಭಾರತ ಈ ಕೂಟದಲ್ಲಿ ಒಟ್ಟು ಐದು ಪದಕ ಗೆದ್ದಿದೆ. ಉಳಿದ ನಾಲ್ಕು ಕಂಚಿನ ಪದಕವಾಗಿದ್ದು ನೀರಜ್ ಬೆಳ್ಳಿ ಗೆದ್ದಂತಾಗಿದೆ. ಗುರುವಾರವಷ್ಟೇ ಭಾರತ ಹಾಕಿ ತಂಡ ಕಂಚು ಗೆದ್ದ ಸಾಧನೆ ಮಾಡಿತ್ತು. ಇದರ ಬೆನ್ನಲ್ಲಿಯೇ ನೀರಜ್ ಬೆಳ್ಳಿ ಗೆದ್ದಿದ್ದಾರೆ.