ಅದು ಹಚ್ಚ ಹಸಿರಿನ ಹೈಬ್ರಿಡ್ ಹುಲ್ಲು ಹಾಗೂ ಸ್ವಲ್ಪ ಕೃತಕ ಪ್ಲಾಸ್ಟಿಕ್ ನಾರುಗಳಿಂದ ಸಿದ್ದಗೊಂಡಿರುವ ಆಯತಾಕಾರದ ವಿನ್ಯಾಸದ ಫುಟ್‍ಬಾಲ್ ಮೈದಾನ. 105 ಮೀಟರ್ ಉದ್ದ, 68 ಮೀಟರ್ ಅಗಲವನ್ನು ಹೊಂದಿರುವ ಫಿಫಾ ವಿಶ್ವಕಪ್ ಮೈದಾನದ ಒಟ್ಟು ವಿಸ್ತೀರ್ಣ 7,140 ಚದರ ಮೀಟರ್. ಅಂದ್ರೆ ಸುಮಾರು 1.76 ಎಕರೆಯ ಈ ರಂಗಮಂಟಪದಲ್ಲಿ ಪರಮ ಸುಂದರಿ ಜೊತೆ ಸರಸ -ವಿರಸವಾಡುತ್ತಾ ಆಡುವ ಆಟಗಾರರ ರಣ ರೋಚಕ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ.
ಹೌದು, 22 ಸೆಂಟಿಮೀಟರ್ ವ್ಯಾಸ ಹೊಂದಿರುವ ಈ ದುಂಡನೆಯ ಕಾಯದ ವೈಯಾರದ ಚೆಂಡು 22 ಆಟಗಾರರ ಕಾಲಿನ ಸ್ಪರ್ಶಕ್ಕೆ ನರ್ತಿಸುವ ಮಾಯಾಂಗನೆಯೂ ಹೌದು. ಪ್ರೇಯಸಿ ಪ್ರೇಮಿಯ ಕೈ ಹಿಡಿದು ನಡೆದಂತೆ ಆಟಗಾರನ ಕಾಲಿಗೆ ಅಂಟಿಕೊಂಡು ಸಾಗುವ ಮುಗುದೆಯೂ ಹೌದು. ಆಟಗಾರರನ ಪಾದದ ರಸಮಯ ಒಡನಾಟಕ್ಕೆ ಜಿಗಿ ಜಿಗಿದು ಓಡಾಡುವ ರೂಪಸಿಯೂ ಹೌದು. ಮುದ್ದಾಟ ಮಾಡುವ ಆಟಗಾರನ ತಾಳಕ್ಕೆ ತಕ್ಕಂತೆ ಕುಣಿಯುವ ನಾಟ್ಯಗಾರ್ತಿಯೂ ಹೌದು. ಆಟಗಾರ ಒದ್ದಾಗ ಬೆದರಿ ನಭಕ್ಕೆ ಹಾರುವ ಮಾಯಾವಿನಿಯೂ ಹೌದು.
ಗಡಿ ದಾಟಿದಾಗ ರೆಫ್ರಿಯ ವಿಶಿಲ್‍ಗೆ ಓಗೊಟ್ಟು ಮರಳಿ ಬರುವ ಮೋಹಿನಿಯೂ ಹೌದು. ಆಟಗಾರರ ಶಕ್ತಿ – ಸಾಮಥ್ರ್ಯವನ್ನು ಪರೀಕ್ಷೆ ಮಾಡುವ ಮಾಟಗಾತಿಯೂ ಹೌದು. ಕ್ಷಣ ಕ್ಷಣಕ್ಕೂ ಮನಸು ಬದಲಾಯಿಸುವ ಚಂಚಲೆ ಚೆಲುವೆಯೂ ಹೌದು. ಆಟಗಾರ ಕಾಲಿನಿಂದ ರಭಸವಾಗಿ ಒದ್ದಾಗ ನೋವನ್ನು ಮರೆತು ಪ್ರೀತಿಯಿಂದ ಗೂಡು ಸೇರುವ ಗುಪ್ತಗಾಮಿನಿಯೂ ಹೌದು.
ಗೆಲುವಿಗಾಗಿ ಮೈದಾನದಲ್ಲಿ ಹೋರಾಡುವ ಆಟಗಾರರ ಬೆವರಿಳಿಸುವ ಬುದ್ದಿವಂತ ಚತುರೆಯೂ ಹೌದು. ಕಾವಲುಗಾರನ ಹದ್ದಿನ ಕಣ್ಣು ತಪ್ಪಿಸಿ ಮೋಹದ ಬಲೆಯೊಳಗೆ ಬೀಳುವ ಬಳುಕುವ ಬೆಡಗಿಯೂ ಹೌದು. ಹಾಗೇ ಕಾವಲುಗಾರನ ಕೈಗೆ ಸಿಲುಕಿದ್ರೂ ಮತ್ತೆ ಮತ್ತೆ ಆಟವಾಡಿಸುವ ಜಾಣೆಯೂ ಹೌದು.
ಕೋಪ -ತಾಪ, ಸರಸ-ವಿರಸ, ಸಿಟ್ಟು -ಆವೇಶದ ನಡುವೆ ಆಟಗಾರ ಒದೆಯುವ ಏಟಿಗೆ ತಿರುಗೇಟು ನೀಡುವ ರಾಕ್ಷಸಿಯೂ ಹೌದು. ಯಾರ ಪ್ರೀತಿ, ಒಲವು ಸಿಗದೇ ಮೈದಾನದಲ್ಲಿ ಅಲೆದಾಡುವ ಭಗ್ನಪ್ರೇಮಿಯೂ ಹೌದು. ಒಡಲಲ್ಲಿ ಡಿಜಿಟಲ್ ಹೃದಯವನ್ನಿಟ್ಟುಕೊಂಡು ಆಟಗಾರರ ಪ್ರತಿ ಸ್ಪರ್ಶವನ್ನು ಲೆಕ್ಕವಿಡುವ ಹಾಗೂ ತಪ್ಪು- ಸರಿ ನಿರ್ಧಾರ ಮಾಡುವ ಅಂತರ್ಯಾಮಿಯೂ ಹೌದು.
ಕೋಟ್ಯಂತರ ಅಭಿಮಾನಿಗಳನ್ನು ಸಮ್ಮೋಹನಗೊಳಿಸುವ ಅಪ್ರತಿಮ ಸೌಂದರ್ಯವತಿಯೂ ಹೌದು. 90 ನಿಮಿಷಗಳ ಕಾಲ ತನ್ನ ಮಾಯಾಜಾಲದ ಮೂಲಕ ಜಗತ್ತನ್ನೇ ಮೋಡಿ ಮಾಡಿ ಸೆಳೆಯುವ ನಿಗೂಢ ಅಂದಗಾರ್ತಿಯೂ ಹೌದು. ಅಷ್ಟಕ್ಕೂ ಈ ಪರಮಸುಂದರಿಯ ಸೈಜ್ ಅನ್ನು ಎ5 ಎಂದು ಕರೆಯಲಾಗುತ್ತದೆ. ಕೇªಲ 430 ಗ್ರಾಮ್ ತೂಕದ ಹಗುರ ಕಾಯ. 69ಸೆಂಟಿಮೀಟರ್ ಅಂದ್ರೆ 27.2 ಇಂಚು ಸುತ್ತಳತೆ ಹೊಂದಿದ್ದರೂ ಅಯಸ್ಕಾಂತದಂತೆ ತನ್ನತ್ತ ಸೆಳೆಯುವ ಜಾದುಗಾರ್ತಿಯೂ ಹೌದು.
ಕೊನೆಯದಾಗಿ ಕೋಟಿ ಕೋಟಿ ಕಂಗಳ ಒಡತಿಯಾಗಿರುವ ಈಕೆಯ ಅಂದ ಚೆಂದ, ಬೆಡಗು ಬಿನ್ನಾಣಕ್ಕೆ ಮನಸೋಲದವರಿಲ್ಲ. ಮಾಯಾಜಾಲಕ್ಕೆ ಬೀಳದವರಿಲ್ಲ. 90 ನಿಮಿಷಗಳ ಆಟ ಮುಗಿದಾಗ ಮೈದಾನ ಖಾಲಿ ಖಾಲಿಯಾಗಬಹುದು.. ಸೋಲಿನ ನೋವು, ಗೆಲುವಿನ ಖುಷಿಯಲ್ಲಿ ಆಟಗಾರರು, ಅಭಿಮಾನಿಗಳು ಮನೆ ಸೇರಬಹುದು. ಆದ್ರೆ ಈಕೆಗೆ ಬಿಡುಗಡೆಯೂ ಇಲ್ಲ..ಆಕೆಯ ಮೋಡಿಗೆ ಕೊನೆಯೂ ಇಲ್ಲ. ಯಾಕಂದ್ರೆ ಆಕೆ ಬರೀ ಹಸಿರು ರಂಗಮಂಟಪದ ಅದೃಶ್ಯ ಸೂತ್ರಧಾರಿಯಲ್ಲ. ಬದಲಾಗಿ ಫುಟ್‍ಬಾಲ್ ಜಗತ್ತಿನ ಅಪ್ರತಿಮ ಮಹಾರಾಣಿ.
ಸನತ್ ರೈ








